

ಲಕ್ಷ್ಮೇಶ್ವರ: ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಘ್ರ ಬದಲಾವಣೆಗಳಾಗಿದ್ದರೂ ಮಕ್ಕಳಲ್ಲಿ ನೈತಿಕ ಮೌಲ್ಯ, ಸಂಸ್ಕೃತಿ ರೂಢಿಸುವ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ. ಅದಕ್ಕೆ ಮತ್ತೆ ಗುರುಕುಲ ಪದ್ಧತಿಯ ಶಿಕ್ಷಣ ಬೇಕಾಗಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ಜ. ವೀರಗಂಗಾಧರ ಸಮುದಾಯ ಭವನದಲ್ಲಿ ಉಮಾ ವಿದ್ಯಾಲಯದ ನಿವೃತ್ತ ಶಿಕ್ಷಕ, ಸಾಹಿತಿ ಎಸ್.ಎಫ್. ಆದಿ ಅವರ ಅಭಿಮಾನಿಗಳು, ಶಿಷ್ಯ ವೃಂದದಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಗುರು-ಶಿಷ್ಯ ಪರಂಪರೆಗೆ ತನ್ನದೇ ಆದ ಇತಿಹಾಸವಿದೆ. ಅನೇಕ ಸಾಧಕರ ಹಿಂದೆ ಗುರುವಿನ ಶ್ರೀರಕ್ಷೆ ಇರುತ್ತದೆ. ದೇಶದ ಸತ್ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳಾದ ಶಿಕ್ಷಕರು ರಾಜಕಾರಣದಿಂದ ದೂರವಿದ್ದು ವೃತ್ತಿ ಪಾವಿತ್ರ್ಯ, ಶ್ರೇಷ್ಠತೆ ಎತ್ತಿ ಹಿಡಿಯಬೇಕು. ಎಸ್.ಎಫ್. ಆದಿ ಗುರುಗಳು ಕಳೆದ 35 ವರ್ಷಗಳಿಂದ ಉಮಾ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳ ಪಾಲಿನ ಶ್ರೇಷ್ಠ ಗುರುವಾಗಿ ಪ್ರಾಮಾಣಿಕ ಸೇವೆ ಮಾಡಿದ್ದಾರೆ ಎಂದರು.
ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಮಾತನಾಡಿ, ಗುರುವು ಧ್ರುವ ನಕ್ಷತ್ರದಂತೆ ವಿದ್ಯಾರ್ಥಿಗಳ ಬದುಕಿಗೆ ಜ್ಞಾನದ ಬೆಳಕನ್ನು ತೋರಿರುತ್ತಾರೆ. ನಮ್ಮ ಬದುಕಿನ ಪರಿವರ್ತನೆಗಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಗುರುವರ್ಯರನ್ನು ಕೃತಜ್ಞತೆ, ಧನ್ಯತಾ ಭಾವದಿಂದ ಸ್ಮರಿಸುವ ಮನೋಧರ್ಮ ಶಿಷ್ಯರದ್ದಾಗಬೇಕು. ಗುರುಗಳು ನೀಡಿದ ಜ್ಞಾನದಿಂದ ಸಮಾಜಮುಖಿ ಸೇವೆ ಮಾಡಿ ಹೆಸರಾದರೆ ಅದು ಗುರುಗಳಿಗೆ ನೀಡಿದ ಕಾಣಿಕೆಯಾಗುತ್ತದೆ ಎಂದರು.
ಎಸ್.ಎಫ್. ಆದಿಯವರಿಗೆ ಕಲಿಸಿದ ಹಿರಿಯ ನಿವೃತ್ತ ಶಿಕ್ಷಕ ಡಾ.ಎಸ್.ವಿ. ಧೂಳಖೇಡ ಮಾತನಾಡಿ, ಶಿಕ್ಷಕ ಎನ್ನುವುದು ಒಂದು ಪವಿತ್ರ ಸೇವೆಯಾಗಿದೆ. ಇದು ಘನತೆ, ದುಡ್ಡು, ಅಂತಸ್ತು ಮಾಡಿಕೊಳ್ಳುವುದಕ್ಕಲ್ಲ. ಶಿಕ್ಷಕನಿಗೆ ವಿದ್ಯಾರ್ಥಿಗಳೇ ದೊಡ್ಡ ಸಂಪತ್ತಾಗಿದ್ದು, ಶಿಷ್ಯ ಗುರು ಮೀರಿ ಬೆಳೆದರೆ ಅದೇ ದೊಡ್ಡ ಬಹುಮಾನವಾಗಿದೆ ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದರು. ಎನ್.ವಿ. ಧೂಳಖೇಡ, ಸಿ.ವಿ. ಕೆರಿಮನಿ, ಆರ್.ಎನ್. ಪಾಟೀಲ, ಎಸ್.ಎಫ್. ಶಿಗ್ಲಿ, ಸಿ.ಎಫ್. ಬೂದಿಹಾಳ, ಎಸ್. ಎಸ್. ನಾಗಲೋಟಿ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ಜಯಕ್ಕ ಅಂದಲಗಿ, ಪೂಜಾ ಖರಾಟೆ, ಮಹೇಶ ಹೊಗೆಸೊಪ್ಪಿನ, ಶಂಕ್ರಮ್ಮ ಆದಿ, ಎಸ್.ಎಫ್. ಆದಿ ದಂಪತಿ ಉಪಸ್ಥಿತರಿದ್ದರು. ನಾಗರಾಜ ಕಳಸಾಪೂರ, ಜಿ.ಎಸ್. ಗುಡಗೇರಿ, ಸೋಮಶೇಖರ ಕೆರಿಮನಿ, ಈಶ್ವರ ಮೇಡ್ಲೇರಿ, ಸ್ನೇಹಾ ಮಾಲಿಪಾಟೀಲ ನಿರೂಪಿಸಿದರು.