

ಹುಬ್ಬಳ್ಳಿ : ಮಕ್ಕಳ ಜೀವನದಲ್ಲಿ ಶಿಕ್ಷಣ ಅತ್ಯಂತ ಪ್ರಾಮುಖ್ಯತೆಯ ವಿಷಯವಾಗಿದೆ. ಒಂದು ಮಗುವು ಸಮಾಜದಲ್ಲಿ ಸಂಸ್ಕೃತಿ, ನೈತಿಕ ಮೌಲ್ಯ, ಜೀವನ ಕೌಶಲಗಳನ್ನೂ ಬೆಳೆಸಿಕೊಳ್ಳಬೇಕಾದರೆ ಶಿಕ್ಷಣ ಅವಶ್ಯಕ ಎಂದು ಮುಖ್ಯೋಧ್ಯಾಪಕಿ ಶಿವಲೀಲಾ ಕಳಸಣ್ಣವರ ಹೇಳಿದರು.
ತಾಲೂಕಿನ ಕುಸುಗಲ್ಲ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷೆ ರಾಜಬಿ ಮಿರ್ಜಾನವರ ಮಾತನಾಡಿ, ವಿದ್ಯಾಭ್ಯಾಸವು ಮಕ್ಕಳಿಗೆ ಉತ್ತಮ ಉದೊ್ಯೕಗ, ಬದುಕಿನಲ್ಲಿ ಯಶಸ್ಸು ಹಾಗೂ ಉನ್ನತ ಜೀವನಮಟ್ಟವನ್ನು ತಲುಪಲು ದಾರಿ ಮಾಡಿಕೊಡುತ್ತದೆ ಎಂದರು.
ಎಸ್ಡಿಎಂಸಿ ಉಪಾಧ್ಯಕ್ಷ ಕಲ್ಲನಗೌಡ ಕೌಜಗೇರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಮಹಾಂತೇಶ ಸಂಕರಡ್ಡಿ, ಗ್ರಾಪಂ ಪಿಡಿಒ ಶಶಿಧರ ಮಂಟೂರ, ಭೀಮಣ್ಣ ನಾಯ್ಕರ್, ಸುಗುಣಾ ಕಾರಡ್ಡಿ, ನಂದೀಶ ನಾಡಿಗೇರ, ಭಾನುಮತಿ ಆಡಗಲ್ಲ, ಅಮೀರಾಬಾನು ದಲಾಲ, ಲೋಕೇಶ, ಪ್ರಭಾಕರ ಪತ್ತಾರ, ವಿ.ಕೆ.ಪುರಾಣಿಕ, ಸುಮಾ ಭಾವಿಕಟ್ಟಿ, ಮಂಜುನಾಥ ಲದ್ದಿಯವರ ಹಾಗೂ ಇತರರು ಪಾಲ್ಗೊಂಡಿದ್ದರು.
ಐ.ಎಂ. ಇಳಕಲ್ಲ ಸ್ವಾಗತಿಸಿದರು. ಸಂಜೀವಕುಮಾರ ಭೂಶೆಟ್ಟಿ ನಿರೂಪಿಸಿದರು. ಗುರುನಾಥ ಬರದೇಲಿ ವಂದಿಸಿದರು.
ಗ್ರಾಮದಲ್ಲಿ ಶಾಲಾ ದಾಖಲಾತಿ ಆಂದೋಲನ -2025 ಪ್ರಭಾತಪೇರಿ ನಡೆಸಲಾಯಿತು.