

ಮಡಿಕೇರಿ: ಶಿಕ್ಷಣದ ಗುರಿ ಕೇವಲ ಅಂಕಗಳಿಗೆ, ರ‌್ಯಾಂಕ್ ಗಳಿಕೆಗೆ ಸಿಮೀತವಾಗಬಾರದು. ಅದರ ಜೊತೆಯಲ್ಲಿ ಆದರ್ಶ ವ್ಯಕ್ತಿಗಳಾಗಿ ಸಮಾಜಕ್ಕೆ ಮತ್ತು ದೇಶಕ್ಕೆ ಅಮೂಲ್ಯ ಸಂಪತ್ತಾಗಿ ಪರಿವರ್ತನೆಯಾಗಬೇಕು. ಈ ರೀತಿಯ ಮಾರ್ಪಾಡು ಮಾಡುವವರು ಮತ್ತು ಹೊಂದುವವರು ನಿಜವಾದ ದೇಶಪ್ರೇಮಿಗಳು ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಮಹದೇವಪೇಟೆಯಲ್ಲಿ ಸಮುದಾಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದ ಸಂಪರ್ಕದ ಕೊಂಡಿಯಾಗಿರುವ ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್‌ನ ದೊಡ್ಡ ಉದ್ದೇಶ ಯಶಸ್ವಿಯಾಗಲಿ ಎಂದು ಹಾರೈಸಿದ ಅವರು, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸರ್ವಜನಾಂಗದವರಿಗೆ ಪ್ರಯೋಜನ ಆಗಬೇಕು. ಈ ಸಂಸ್ಥೆ ಇತರರಿಗೆ ಪ್ರೇರಣೆಯಾಗಬೇಕು. ಸರ್ಕಾರದಿಂದ ಯಾವುದೇ ಸಂದರ್ಭದಲ್ಲಿ ಸಹಕಾರ ಸಿಗಲಿದೆ ಎಂದರು.
ಉತ್ತಮ ಸಮಾಜ ದೇಶಕ್ಕೆ ಅತ್ಯಗತ್ಯ. ಯುವ ಜನತೆ ಶಿಕ್ಷಣದ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಮತ್ತು ಪ್ರೀತಿ, ವಿಶ್ವಾಸ ಸಂಪಾದಿಸಬೇಕು. ಸಮಾಜ ಕಟ್ಟುವುದಕ್ಕಾಗಿ ಯುವ ಜನಾಂಗವನ್ನು ಬೆಳೆಸಬೇಕೇ ಹೊರತು ದು:ಖ ಸೃಷ್ಟಿಗಾಗಿ ಅಲ್ಲ. ಯುವಕರಲ್ಲಿ ಸಕರಾತ್ಮಕ ಚಿಂತನೆ ಬರುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ನಾವು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ. ಶಿಕ್ಷಣದ ಮೂಲಕ ಒಬ್ಬ ಅಧಿಕಾರಿಯನ್ನು ನೀಡುವುದರ ಜೊತೆಗೆ ಒಬ್ಬ ಉತ್ತಮ ಜನಪ್ರತಿನಿಧಿಯನ್ನು ಕೂಡ ನೀಡುವ ಅನಿವಾರ್ಯತೆ ಇದೆ ಎಂದು ಯು.ಟಿ.ಖಾದರ್ ತಿಳಿಸಿದರು.
ನಂತರ ಕಾವೇರಿ ಹಾಲ್‌ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು, ಉಮ್ಮತ್ ಒನ್ ಕೊಡಗು ಸಂಸ್ಥೆ ಸಮಾಜಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಇರಬೇಕು, ಜಾತಿ ಧರ್ಮ, ಬೇಧಭಾವವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯೊಂದಿಗೆ ತಾವು ಇರುವುದಾಗಿ ಭರವಸೆ ನೀಡಿದ ಅವರು, ಶಿಕ್ಷಣದ ಮೂಲಕ ಉತ್ತಮ ಬದಲಾವಣೆ ತರಲು ಸಾಧ್ಯ, ಹೆಣ್ಣುಮಕ್ಕಳು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.
ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್ ಮಾತನಾಡಿ, ಮಡಿಕೇರಿ ಕೇಂದ್ರದಲ್ಲಿ ಸುಸಜ್ಜಿತವಾದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಆರಂಭಗೊಂಡಿದ್ದು, ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಸಮಾಜದ ಸರ್ವರೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ನಿವೃತ್ತ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ, ಶಿಕ್ಷಣ ನಮ್ಮನ್ನು ಬಲಿಷ್ಠರನ್ನಾಗಿ ಮಾಡಬೇಕು. ಯಾವುದೇ ಆಕರ್ಷಣೆ, ಆಮಿಷಗಳಿಗೆ ಒಳಗಾಗದೆ ನಿರ್ದಿಷ್ಟ ಗುರಿಯ ಕಡೆಗೆ ಕೊಂಡೊಯ್ಯಬೇಕು ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ಸರಸ್ವತಿ ಆರಾಧನೆಗಿಂತ ಲಕ್ಷ್ಮಿ ಆರಾಧನೆ ಹೆಚ್ಚಾಗಿದ್ದು, ಎಲ್ಲವನ್ನು ಹಣದಲ್ಲಿ ಅಳತೆ ಮಾಡುವ ಬದಲು ಸರಸ್ವತಿಯ ಆರಾಧನೆಯ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಪ್ರತಿಯೊಬ್ಬರು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಮತ್ತು ಕಠಿಣ ಪರಿಶ್ರಮದ ಮೂಲಕ ಯಶಸ್ಸು ಸಾಧಿಸಬೇಕು ಎಂದರು.
ವಿದ್ಯಾರ್ಹತೆಗೆ ತಕ್ಕ ವರ ಸಿಗುತ್ತಿಲ್ಲ: ಈ ಹಿಂದೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಘೋಷವಾಕ್ಯವನ್ನು ಹೇಳಲಾಗುತ್ತಿತ್ತು. ಆದರೆ, ಇಂದು ಎಲ್ಲಾ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಆದರೆ ಯುವಕರು ಕಾಲಹರಣ, ದುಶ್ಚಟಗಳಿಂದ ತಮ್ಮ ಶಿಕ್ಷಣವನ್ನು ಕುಂಠಿತಗೊಳಿಸುತ್ತಿದ್ದು, ಇದರಿಂದ ಯುವತಿರ ವಿದ್ಯಾರ್ಹತೆಗೆ ತಕ್ಕ ವರನನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ದಿನಗಳಲ್ಲಿ ಇದೊಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ಬೆಳೆಯುತ್ತಿದ್ದು, ಯುವಕರೂ ಹೆಚ್ಚಿನ ಶಿಕ್ಷಣ ಪಡೆಯುವಂತಾಗಬೇಕು ಮತ್ತು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಕೊಡುಗೆ ನೀಡಬೇಕು ಎಂದು ಎ.ಬಿ.ಇಬ್ರಾಹಿಂ ಸಲಹೆ ನೀಡಿದರು.
ಭಾರಧಿಯಾರ್ ಯನಿವರ್ಸಿಟಿಯ ಸಿಂಡಿಕೇಟ್ ಸದಸ್ಯ ಡಾ.ರಾಶೀದ್ ಗಝಾಲಿ ಮಾತನಾಡಿ, ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಛಲದೊಂದಿಗೆ ಪರಿಶ್ರಮಪಟ್ಟರೆ ಎಲ್ಲವೂ ಸಾಧ್ಯ, ಎಲ್ಲರೂ ದೊಡ್ಡ ಕನಸನ್ನು ಕಾಣಬೇಕು ಮತ್ತು ಸಕಾರಗೊಳಿಸುವ ಕೆಲಸ ಮಾಡಬೇಕು ಎಂದರು.
ಪುಣೆಯ ಅನಿಶ್ ಡೆಫೆನ್ಸ್ ಕ್ಯಾರಿಯರ್ ಇನ್ಸಿಟ್ಯೂಟ್‌ನ ಸ್ಥಾಪಕ ನಿರ್ದೇಶಕ ಅನಿಸ್ ಕುಟ್ಟಿ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯಾವ ರೀತಿಯ ಪೂರ್ವ ತಯಾರಿ ನಡೆಸಬೇಕು ಮತ್ತು ಆಯ್ಕೆ ಪ್ರಕ್ರಿಯೆಗಳು ಹೇಗೆ ನಡೆಯುತ್ತದೆ ಎನ್ನುವ ಕುರಿತು ಮಾರ್ಗದರ್ಶನ ನೀಡಿದರು. ಅಲ್ಲದೆ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ, ಬೀದರ್‌ನ ಶಾಹಿದ್ ಗ್ರೂಫ್ ಆಫ್ ಇನ್ಸ್‌ಟ್ಯೂಟ್ ಸಿಇಓ ಡಾ.ತೌಸೀಫ್ ಅಹಮ್ಮದ್, ಪುತ್ತೂರು ಕಮ್ಯೂನಿಟಿ ಸೆಂಟರ್ ಸ್ಥಾಪಕ ಹನೀಫ್ ಪುತ್ತೂರು, ಎಂ.ಎಫ್.ಐ.ಎಫ್‌ನ ಉಪಾಧ್ಯಕ್ಷ ಕೆ.ಎಂ.ಮುಸ್ತಫ, ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಪ್ರಮುಖ ಕೆ.ಬಿ.ರಿಯಾರ್ ಅಹಮ್ಮದ್ ಸೇರಿದಂತೆ ಮತ್ತಿರರ ಗಣ್ಯರು, ಒಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳು, ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕರ್ನಾಟಕ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್ ಹಾಗೂ ಉಮ್ಮತ್ ಒನ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಎಂ.ಬಿ.ಬಶೀರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.