ಪಾತಪಾಳ್ಯ: ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣಕ್ಕೆ ಗಮನ ಕೊಡಬೇಕು ಎಂದು ಬೆಂಗಳೂರಿನ ಲೈಟ್ ಎ ಡ್ರೀಮ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಪಿ. ದೌವಲತ್ತುಲ್ಲಾ ತಿಳಿಸಿದರು.
ಸೋಮನಾಥಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ನೀಡಿದ ಕಲಿಕಾ ಸಾಮಗ್ರಿಗಳನ್ನು ಬುಧವಾರ ವಿತರಿಸಿ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ, ಅಂಕಗಳಿಕೆ, ಉದ್ಯೋಗ ಸಂಪಾದನೆಗೆ ಸೀಮಿತವಾಗಿದೆ. ವಿದ್ಯಾರ್ಥಿಗಳಲ್ಲಿ ಮಾನವೀಯ ಸಂಬಂಧ, ನೈತಿಕತೆ ಮೌಲ್ಯಗಳು ಮಾಯವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ವ್ಯವಸ್ಥಾಪಕ ಪಿ.ಹರ್ಷ ಮಾತನಾಡಿ, ಆಧುನಿಕತೆ ಸೋಗಿನಲ್ಲಿ ಮೊಬೈಲ್, ಕಂಪ್ಯೂಟರ್, ಸಾಮಾಜಿಕ ಜಾಲತಾಣಗಳ ಮಿತಿಮೀರಿದ ಬಳಕೆ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಓದಿನ ಕಡೆ ಗಮನ ಹರಿಸಿ ಉತ್ತಮ ವ್ಯಕ್ತಿಗಳಾಗಬೇಕು ಕಿವಿಮಾತು ಹೇಳಿದರು.
ಪ್ರಭಾರ ಮುಖ್ಯ ಶಿಕ್ಷಕ ಎಲ್.ಸುಬ್ರಹ್ಮಣ್ಯಂ ಮಾತನಾಡಿದರು. ಶಿಕ್ಷಕರಾದ ಬಿ.ಮಂಜುನಾಥ್, ಎಚ್.ಎನ್.ಸುಮನಾ, ದೈಹಿಕ ಶಿಕ್ಷಣ ಶಿಕ್ಷಕ ಹನುಮಪ್ಪ ಸೊಟ್ಟಕ್ಕನವರ್, ಅತಿಥಿ ಶಿಕ್ಷಕಿಯರಆದ ಶಿವಮ್ಮ, ನಂದಿನಿ ಮತ್ತಿತರರು ಇದ್ದರು.