

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಣ ಕೇವಲ ವಿಷಯ ರವಾನಿಸುವ ಪ್ರಕ್ರಿಯೆ ಆಗಬಾರದು. ಮಗು ಪರಿಸರದ ಜತೆಗೆ ಸಾಮರಸ್ಯದಿಂದ ಬದುಕುವಂತೆ ಹಾಗೂ ಮಗುವಿನ ಮನಸ್ಸು ಬೆಸೆಯುವಂತಾಗಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನಂದೀಶ ಕಾಖಂಡಕಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಶಿಕ್ಷಣಕ್ಕೆ ರವೀಂದ್ರನಾಥ ಟ್ಯಾಗೂರ ಕೊಡುಗೆ ಕುರಿತು ಉಪನ್ಯಾಸ ನೀಡಿದರು.
ಕವಿ ಟ್ಯಾಗೂರ ಮಾನವತ್ವದ ಪ್ರತಿಪಾದಕರು. ಅವರದ್ದು ವಿಶ್ವಮಾನವ ದೃಷ್ಟಿಕೋನ. ವಿಶ್ವವೇ ಒಂದು ಮನೆ ಎಂಬ ಭಾವನೆ ಮಕ್ಕಳಲ್ಲಿ ಬೆಳೆಸಲು ಶಾಂತಿ ನಿಕೇತನ ಎಂಬ ಶಾಲೆ ತೆರೆದರು. ಮುಂದೆ ಅದೇ ಶಾಲೆ ವಿಶ್ವಭಾರತಿ ಎಂದು ಖ್ಯಾತಿ ಪಡೆಯಿತು. ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಇದೇ ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದರು. ಶಾಂತಿ ನಿಕೇತನದಲ್ಲಿ ಸಾಂಪ್ರದಾಯಿಕ ಶಿಕ್ಷಣದ ಜತೆಗೆ ಸಂಸ್ಕಾರ, ನೈತಿಕತೆ, ಸಂಗೀತ, ನೃತ್ಯ, ಗ್ರಾಮೀಣ ಕ್ರೀಡೆಗಳಿಗೂ ಅವಕಾಶವಿತ್ತು ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯಾಧ್ಯಾಪಕ ಮೃತ್ಯುಂಜಯ ಬಂಗಾರಿಮಠ ಮಾತನಾಡಿದರು. ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಪ್ರಭಾಕರ ಲಗಮಣ್ಣವರ, ಮಧುಮತಿ ಸಣಕಲ್, ಇತರರು ಇದ್ದರು.
ಶ್ರೀಧರ ಗಸ್ತಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ. ಜಿನದತ್ತ ಹಡಗಲಿ ವಂದಿಸಿದರು.