ಶಿಕ್ಷಣ ಸಚ್ಚಾರಿತ್ರ್ಯ ಬೆಳೆಸುವ ಮಾಧ್ಯಮವಾಗಲಿ

22 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಿಕ್ಷಣ ಕೇವಲ ಜ್ಞಾನಕ್ಕಾಗಿ, ವಿದ್ಯಾ ಬುದ್ಧಿಗಾಗಿ ಅಲ್ಲ. ಮಕ್ಕಳಲ್ಲಿ ಮಕ್ಕಳಲ್ಲಿ ಸಚ್ಚಾರಿತ್ರ್ಯ ಬೆಳೆಸುವ ಮಾಧ್ಯಮ ಶಿಕ್ಷಣ ವಾಗಬೇಕಾಗಿದೆ. ಅಂತಹ ಕೆಲಸವನ್ನು ಪ್ರತಿಷ್ಠಿತ ಸಂಸ್ಥೆಯಾದ ರಾಷ್ಟ್ರೊತ್ಥಾನ ಪರಿಷತ್​ ಮಾಡುತ್ತಿದೆ ಎಂದು ವಿಧಾನ ಪರಿಷತ್​ ಸದಸ್ಯ ಶಾಂತರಾಮ ಸಿದ್ದಿ ಅಭಿಪ್ರಾಯಪಟ್ಟರು.

ನಗರದ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಏರ್ಪಡಿಸಿದ್ದ "ರಾಷ್ಟ್ರೊತ್ಸವ ಸನಾತನ ಸಂಸ್ಕೃತಿ ಕಾರ್ಯಕ್ರಮ' ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಕಾರ, ಭಾರತೀಯತೆ, ಸಾಮಾಜಿಕ ಪರಿವರ್ತನೆ ತರುವಂತಹ ಶಿಕ್ಷಣ ಸಮಾಜಕ್ಕೆ ಬೇಕಾಗಿದೆ. ಇಂತಹ ಶಿಕ್ಷಣ ಕೊಡುವುದು ಒಂದು ಸವಾಲಿನ ವಿಷಯವೂ ಆಗಿದೆ. ರಾಷ್ಟ್ರೊತ್ಥಾನದಂತಹ ಶಾಲೆಗಳು ಆ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ. ಇಲ್ಲಿ ಶಿಕ್ಷಣ, ಸಂಸ್ಕಾರ ಪಡೆದ ನಂತರ ಎಲ್ಲ ಮಕ್ಕಳು ಸಮಾಜಮುಖಿ ಕೆಲಸಗಳಲ್ಲಿ ಅದರಲ್ಲೂ ವನವಾಸಿ ಕಲ್ಯಾಣದಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ರಾಷ್ಟ್ರೊತ್ಥಾನ ಪರಿಷತ್​ ಪ್ರಧಾನ ಕಾರ್ಯದರ್ಶಿ ದಿನೇಶ ಹೆಗಡೆ ಮಾತನಾಡಿ, ರಾಷ್ಟ್ರೊತ್ಥಾನ ಪರಿಷತ್​ ಸ್ವಸ್ಥ, ಸುಸ್ಥಿರ, ಸಮಾಜ ನಿರ್ಮಾಣದ ಗುರಿ ಇಟ್ಟುಕೊಂಡಿದೆ. ಆ ದಿಕ್ಕಿನಲ್ಲಿ ಪರಿಷತ್​ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೊತ್ಥಾನದಲ್ಲಿ ಕಲಿತ ಮಕ್ಕಳು ದೇಶದ ಆಸ್ತಿಗಳಾಗಲಿ ಎಂದರು.

ವಿದ್ಯಾ ಕೇಂದ್ರದ ಪ್ರಾಚಾರ್ಯೆ ಡಾ. ಅನಿತಾ ರೈ. ವರದಿ ವಾಚಿಸಿದರು. ಆಡಳಿತಾಧಿಕಾರಿ ಕುಮಾರಸ್ವಾಮಿ ಕುಲಕರ್ಣಿ, ರೇಖಾ ಅಂಬೇಕರ, ಗುರುರಾಜ ಅಗಡಿ, ಎಂ.ಎನ್​. ಮಠಪತಿ, ಶಿಕ್ಷಕರು, ಇತರರು ಇದ್ದರು.

ರಂಗನಾಥ ಕುಲಕರ್ಣಿ ಸ್ವಾಗತಿಸಿದರು. ಶಾಲೆ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವರಾಜ್​ ಭಟ್​ ನಿರೂಪಿಸಿದರು. ಕೃಷ್ಣ ಜೋಶಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net