

ಗಜೇಂದ್ರಗಡ: ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಕೊಠಾರಿ ಆಯೋಗದ ಶಿಫಾರಸಿನಂತೆ ಹೆಚ್ಚಿನ ಅನುದಾನ ನೀಡದೆ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸುತ್ತ ಬಂದಿವೆ ಎಂದು ಎಸ್.ಎಫ್.ಐ ರಾಜ್ಯ ಘಟಕದ ಅಧ್ಯಕ್ಷ ಅಮರೇಶ ಕಡಗದ ಹೇಳಿದರು.
ಪಟ್ಟಣದ ವಿಘ್ನೕಶ್ವರ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಎಸ್ಎಫ್ಐ ತಾಲೂಕು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ ಎನ್ಇಪಿ ಜಾರಿಗೊಳಿಸುವ ಮೂಲಕ ಶೈಕ್ಷಣಿಕ ಕ್ಷೇತ್ರವನ್ನು ದಿವಾಳಿ ಮಾಡಿವೆ. ಹೀಗಾಗಿ ಈ ಸಮಾವೇಶದ ಮೂಲಕ ಗಜೇಂದ್ರಗಡ ತಾಲೂಕಿನ ಸಮಸ್ಯೆಗಳಾದ ಸಮಾನ ಗುಣಮಟ್ಟದ ಶಿಕ್ಷಣ, ಸ್ನಾತಕೋತ್ತರ ಪದವಿ ಕೇಂದ್ರ ಸ್ಥಾಪನೆ, ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಸ್ಥಾಪನೆ, ಹಳ್ಳಿಗಳಿಗೆ ಬಸ್ ಸೌಲಭ್ಯ ಸೇರಿ ರಾಜ್ಯದ ಸಮಸ್ಯೆಗಳಿಗೆ ಧ್ವನಿಯಾಗಬೇಕು ಆಶಿಸಿದರು.
ಮಾಜಿ ಮುಖಂಡ ಎಂ.ಎಸ್.ಹಡಪದ ಮಾತನಾಡಿ, ಗಜೇಂದ್ರಗಡದಲ್ಲಿ ಎಸ್ಎಫ್ಐಗೆ ತನ್ನದೆ ಆದ ಇತಿಹಾಸವಿದೆ. ಈ ಸಮಾವೇಶದ ಮೂಲಕ ಆಯ್ಕೆಯಾದ ಸಮಿತಿ ಅದನ್ನು ಉಳಿಸುವ ಕಾರ್ಯ ಮಾಡಬೇಕು ಎಂದರು.
ಎಸ್.ಎಫ್.ಐ ರಾಜ್ಯ ಪದಾಧಿಕಾರಿ ಗಣೇಶ ರಾಠೋಡ ಮಾತನಾಡಿ, ತಾಲೂಕಿನಲ್ಲಿ ಸ್ನಾತಕೋತ್ತರ ಪದವಿ ಕೇಂದ್ರ, ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ, ಇಂದಿರಾ ಕ್ಯಾಂಟೀನ್, ತಾಲೂಕು ಕಚೇರಿಗಳ ಸ್ಥಾಪನೆಯಾಗಿಲ್ಲ. ಎಲ್ಲ ಶಾಲೆ-ಕಾಲೇಜುಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದ್ದು, ಅವುಗಳನ್ನು ಪಡೆಯಲು ಹೋರಾಟ ರೂಪಿಸಲು ಈ ಸಮಾವೇಶದಲ್ಲಿ ನಿರ್ಣಯ ಮಾಡಲಾಗಿದೆ ಎಂದರು.
ಚಂದ್ರು ರಾಠೋಡ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಫ್.ಐನ ಗಜೇಂದ್ರಗಡ ತಾಲೂಕು ಸಮಿತಿ ರಚಿಸಲಾಯಿತು. ಪೀರು ರಾಠೋಡ, ಎನ್.ಎಸ್. ಕಲಕೇರಿ, ಬಿ.ಕೆ. ಮಾದಿ, ಬಸವರಾಜ ಸಂಕನೂರ, ಇತರರಿದ್ದರು.