ಆ.30ರಂದು ನಗರದಲ್ಲಿ ಅಧ್ಯಾಪನ ವಿಜ್ಞಾನೋತ್ಸವ: ಟ್ರಸ್ಟ್ ಸಿಇಒ ಎಂ.ಜಿ.ದಿವ್ಯಶ್ರೀ ಮಾಹಿತಿ

Education Science Festival Mandya
Published on

ಮಂಡ್ಯ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ ಹಾಗೂ ಇಂಡಿಯನ್ ಸೈನ್ಸ್ ರಿಸರ್ಚ್ ಆರ್ಗನೈಜೇಷನ್ ಸಹಯೋಗದಲ್ಲಿ ನಗರದ ಎ ಆ್ಯಂಡ್ ಎ ಕನ್ವೆಕ್ಷನ್ ಹಾಲ್‌ನಲ್ಲಿ ಆ.30ರಂದು ಅಧ್ಯಾಪನ ವಿಜ್ಞಾನೋತ್ಸವ-2025 ಶೀರ್ಷಿಕೆಯಡಿ ಜಿಲ್ಲಾಮಟ್ಟದ ವಿಜ್ಞಾನ ತರಂಗ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಅಧ್ಯಾಪನ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಸಿಇಒ ಎಂ.ಜಿ.ದಿವ್ಯಶ್ರೀ ತಿಳಿಸಿದರು.

ಕಳೆದ ವರ್ಷ ಮೊದಲ ಬಾರಿಗೆ ವಿಜ್ಞಾನೋತ್ಸವ ನಡೆಸಲಾಗಿತ್ತು. ಆಗ ಅಭೂತಪೂರ್ವ ಸ್ಪಂದನೆ ಸಿಕ್ಕಿತ್ತು. 800ಕ್ಕೂ ಹೆಚ್ಚು ಶಾಲೆಗಳ 6,702 ವಿದ್ಯಾರ್ಥಿಗಳು ಪಾಲ್ಗೊಂಡು 1,950 ವಿಜ್ಞಾನ ಮಾದರಿ ಪ್ರದರ್ಶಿಸಿದ್ದರು. ಈ ಹಿನ್ನಲೆಯಲ್ಲಿ ಅಧ್ಯಾಪನ ವಿಜ್ಞಾನೋತ್ಸವಕ್ಕೆ ರಾಜ್ಯದಲ್ಲೇ ಪ್ರಥಮ ಬಾರಿಗೆ ನೊಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಲಭಿಸಿತ್ತು. ವಿಜೇತರಾದ 310 ವಿದ್ಯಾರ್ಥಿಗಳನ್ನು ಇಸ್ರೋ ಮ್ಯೂಸಿಯಂ, 120 ಮಕ್ಕಳನ್ನು ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಉಚಿತವಾಗಿ ಕರೆದೊಯ್ದು ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಎರಡನೇ ವರ್ಷ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಧಾನಸೌಧದಲ್ಲಿ ವಿಜ್ಞಾನೋತ್ಸವದ ಲಾಂಚನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ರವಿಕುಮಾರ್ ಗಣಿಗ, ದರ್ಶನ್ ಪುಟ್ಟಣ್ಣಯ್ಯ, ಕೆ.ಎಂ.ಉದಯ್, ಮಧು ಮಾದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ ಬಿಡುಗಡೆ ಮಾಡಿದ್ದಾರೆ ಎಂದರು.

ಈ ವರ್ಷ ಐದು ಅಂಶ ಆಧರಿಸಿ ಸ್ಪರ್ಧೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಂದ ನವೀನ ವಿಜ್ಞಾನ ಮಾದರಿಗಳು, ಗ್ರಾಮೀಣಾಭಿವೃದ್ಧಿಗಾಗಿ ಹ್ಯಾಕಥಾನ್, ಟೆಕ್ಲೆಟಿಕ್ಸ್(ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ರೀಡೆ), ಪೋಯೇಟಿಕ್ ಸೈನ್ಸ್(ವಿಜ್ಞಾನ ಶಿಕ್ಷಕರಿಗೆ) ಹಾಗೂ ವಿಜ್ಞಾನ ನಾಟಕ ಸ್ಪರ್ಧೆ ನಡೆಯಲಿದೆ. ಈ ಬಾರಿ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು 3,000ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳ ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ. ಭಾಗವಹಿಸುವ ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಸಿಕೊಳ್ಳಲು ಜು.30 ಕಡೆಯ ದಿನ. ಈ ಸಂಬಂಧ ಈಗಾಗಲೇ ಎಲ್ಲ ಶಾಲೆಗಳ ಶಿಕ್ಷಕರಿಗೆ ಮಾಹಿತಿ ಮತ್ತು ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಟ್ರಸ್ಟ್‌ನ ಆಡಳಿತಾಧಿಕಾರಿ ಕೆ.ಆರ್.ಪೃಥ್ವಿ, ಕಾರ್ಯದರ್ಶಿ ಜಿ.ಟಿ.ಪ್ರವೀಣ್‌ಕುಮಾರ್, ಸಂಯೋಜಕ ಜೆ.ವಿ.ಮನು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net