ಸುಧಾರಣೆಗೆ ಶಿಕ್ಷಣ ಕ್ರಾಂತಿ, ಶ್ರೀ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿ

Choudayya
Published on

ಮಂಗಳೂರು: ಸಮಾಜದಲ್ಲಿ  ತರಲು ಶಿಕ್ಷಣ ಕ್ರಾಂತಿ ಅಗತ್ಯ. ಪ್ರಸ್ತುತ ಸಮುದಾಯದಲ್ಲಿ ಈ ಪ್ರಯತ್ನ ನಡೆಯುತ್ತಿದ್ದು, ಎಲ್ಲರೂ ಶೈಕ್ಷಣಿಕವಾಗಿ ಮುಂದೆ ಬರುತ್ತಿದ್ದಾರೆ. ಇದರಿಂದ ಬದಲಾವಣೆಯ ಗಾಳಿ ಬೀಸಲಿದೆ ಎಂದು ಹಾವೇರಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಜಗದ್ಗುರು ಶ್ರೀ ಶಾಂತ ಭೀಷ್ಮ ಚೌಡಯ್ಯ ಮಹಾಸ್ವಾಮಿ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ರಾಷ್ಟ್ರೀಯ ಮೀನುಗಾರರ ಸಂಘ ಕರ್ನಾಟಕ ಹಾಗೂ ಮಂಗಳೂರು ವಿವಿ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಆಯೋಜಿಸಿದ ವಿಶೇಷ ವಿಚಾರ ಸಂಕಿರಣ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.

ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಲಾಭ ಪಡೆಯಬೇಕಾದರೆ ಗುರುಪೀಠದಡಿ ಎಲ್ಲ 39 ಪಂಗಡಗಳು ಒಟ್ಟಾಗಿ ಸರ್ಕಾರದ ಕಣ್ಣು ತೆರೆಸುವ ಕೆಲಸಮಾಡಿ, ಬೇಡಿಕೆ ಈಡೇರಿಸಿಕೊಳ್ಳಬೇಕು. ಭಗವದ್ಗೀತೆ ಬರೆದವರ ಸಮುದಾಯಕ್ಕೆ ಸೇರಿದವರಾದ ನಾವು ನಿಜ ಅರ್ಥದಲ್ಲಿ ವಾರೀಸುದಾರರು ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರಾಷ್ಟ್ರೀಯ ಮೀನುಗಾರಿಕಾ ನೀತಿ ಅವಶ್ಯಕತೆಯ ವಿಚಾರ ಮಂಡಿಸಿದರು.

ಶಾಸಕ ಲಾಲಾಜಿ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಆರ್.ರಘು ಕೌಟಿಲ್ಯ, ಕೆಎಫ್‌ಡಿಸಿ ಅಧ್ಯಕ್ಷ ನಿತಿನ್ ಕುಮಾರ್, ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ನಿಗಮದ ಅಧ್ಯಕ್ಷ ಅಪ್ಪಣ್ಣ, ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣ ತಲವಾರ ಸೇರಿದಂತೆ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ತೆಲಂಗಾಣ, ತಮಿಳುನಾಡು ರಾಜ್ಯಗಳಿಂದ ಮೀನುಗಾರ ಮುಖಂಡರು ಭಾಗವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣ ತಲವಾರ ‘ಮೀನುಗಾರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ಸುಧಾರಣೆ’, ಮೀನುಗಾರಿಕಾ ಕಾಲೇಜು ಡೀನ್ ಡಾ.ಸೆಂಥಿಲ್ವೇಲ್ ‘ಮೀನುಗಾರಿಕೆಯಲ್ಲಿ ವಿಪುಲ ಅವಕಾಶಗಳ ಸದ್ಬಳಕೆ’, ಕೋಸ್ಟ್ ಗಾರ್ಡ್ ಡಿಐಜಿ ವೆಂಕಟೇಶ್ ‘ಅವಘಡ ಸಂದರ್ಭ ಬೋಟ್ ಹಾಗೂ ಮೀನುಗಾರರ ರಕ್ಷಣೆ’ ಸೇರಿದಂತೆ ವಿವಿಧ ವಿಚಾರಗಳಲ್ಲಿ ಉಪನ್ಯಾಸ ನೀಡಿದರು.

ರಾಷ್ಟ್ರೀಯ ಮೀನುಗಾರ ಸಂಘ ಕರ್ನಾಟಕ ಅಧ್ಯಕ್ಷ ಡಾ.ದೇವಿ ಪ್ರಸಾದ್ ಹೆಜಮಾಡಿ ಸ್ವಾಗತಿಸಿದರು. ಶ್ವೇತಾ ಸುಬ್ಬಣ್ಣ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಡಿ.ರವಿಕುಮಾರ್ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net