ಜಯದೇವ ಶ್ರೀಗಳಿಂದ ಶಿಕ್ಷಣ ಕ್ರಾಂತಿ

3
Published on

ವಿಜಯವಾಣಿ ಸುದ್ದಿಜಾಲ ತುಮಕೂರು
ಬಡ ಕುಟುಂಬದಲ್ಲಿ ಜನಿಸಿದ ಜಯದೇವ ಜಗದ್ಗುರುಗಳು 1903ರಲ್ಲಿ ಚಿತ್ರದುರ್ಗ ಬೃಹನ್ಮಠದ ಅಧ್ಯಕ್ಷರಾಗಿ ಹಲವಾರು ರಾಜಮನೆತನಗಳಿಂದ ಗೌರವಿಸಲ್ಪಟ್ಟವರು. ಉಚಿತ ಹಾಸ್ಟಲ್​ಗಳನ್ನು ಸ್ಥಳಿಯರ ಸಹಕಾರದಿಂದ ದೇಶದಾದ್ಯಂತ ಸ್ಥಾಪಿಸಿ ಶಿಕ್ಷಣ ಕ್ರಾಂತಿ ಮಾಡುವ ಮೂಲಕ ರಾಷ್ಟ್ರನಿಮಾರ್ಣದಲ್ಲಿ ಬಹುಮುಖ್ಯ ಪಾತ್ರವಹಿಸಿ ಯುಗ ಪ್ರವರ್ತಕರೆನಿಸಿಕೊಂಡಿದ್ದಾರೆ ಎಂದು ಸಂಶೋಧಕ ಡಾ.ಡಿ.ಎನ್​.ಯೋಗೀಶ್ವರಪ್ಪ ಹೇಳಿದರು.


ನಗರದ ಜಯದೇವ ಮುರುಘರಾಜೇಂದ್ರ ಸಭಾಂಗಣದಲ್ಲಿ ಮಂಗಳವಾರ ಬಸವಕೇಂದ್ರ ಮತ್ತು ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್​ ಏರ್ಪಡಿಸಿದ್ದ ಜಗದ್ಗುರು ಜಯದೇವ ಮುರುಘರಾಜೇಂದ್ರ ಸ್ವಾಮಿಗಳ 150ನೇ ಜಯಂತ್ಯುತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಸುತ್ತುಕಟ್ಟು ಸಂಸತಿಯ ನೇತಾರರಾಗಿದ್ದ ಜಯದೇವ ಜಗದ್ಗುರುಗಳು ನಾಲ್ವಡಿ ಕೃಷ್ಣರಾಜ ಒಡೆಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಮಾನವನ ಕಾಯವು ನಶ್ವರ ಆತನ ಕಾರ್ಯಗಳು ಅನಂತ ಎಂದು ಹೇಳುತ್ತಿದ್ದ ಶ್ರೀಗಳೂ, ಅವರು ಮಾಡಿದ ಸತ್ಕಾರ್ಯಗಳು ಅವರನ್ನು ಅಮರರನ್ನಾಗಿಸಿವೆ. ಈ ಮೂಲಕ ಇವರು ಇಂದಿನ ಮಠಾಧಿಪತಿಗಳಿಗೆ ಮಾದರಿಯಾಗಿದ್ದಾರೆ ಎಂದರು.


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ಕೆ.ಎಸ್​.ಸಿದ್ಧಲಿಂಗಪ್ಪ ಮಾತನಾಡಿ, ಜಯದೇವಶ್ರೀಗಳು ತಮ್ಮ ಪಾಲಿನ ಕರ್ತವ್ಯ ಹೊಣೆಗಾರಿಕೆ ಜವಾಬ್ದಾರಿ ಕಾಯಕ ಮಾಡುವ ಮೂಲಕ ಜಗತ್ತಿಗೆ ಗುರುಗಳಾದರು. ಅವರ ಬದುಕು ಚಿಂತನೆ ಅಧ್ಯಯನ ಮಾಡಬೇಕು ಆಗ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ತಮ್ಮ ಬಳಿಗೆ ಬರುವ ಭಕ್ತ ಸಮುದಾಯಕ್ಕೆ ಉತ್ತಮ ಸಂದೇಶಗಳನ್ನು ಮಾರ್ಗದರ್ಶನ ನೀಡುತ್ತಿದ್ದ ಇವರು, ಚಿತ್ರದುರ್ಗದ ಬೃಹನ್ಮಠವನ್ನು ತ್ರಿವಿಧ ದಾಸೋಹದ ಕೇಂದ್ರವನ್ನಾಗಿ ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.


ಆಯುರ್ವೇದ ವೈದ್ಯ ಡಾ.ಬಿ.ನಂಜುಂಡಸ್ವಾಮಿ ಮಾತನಾಡಿ, 1874ರಲ್ಲಿ ಸಾಮಾನ್ಯ ಕುಟುಂಬವೊಂದರಲ್ಲಿ ಗದಗಿನಲ್ಲಿ ಜನಿಸಿದ ಇವರು ಚಿತ್ರದುರ್ಗದ ಶೂನ್ಯ ಸಿಂಹಾಸನದ ಪೀಠಾಧಿಪತಿಗಾಳಗಿ ನಿರ್ವಹಿಸಿದ ಕರ್ತವ್ಯಗಳನ್ನು ಮರೆಯುವಂತಿಲ್ಲ. 1917ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ಅಧಿವೇಶನದಲ್ಲಿ ಭಾಗವಹಿಸಿ, ಅದಕ್ಕೆ ಚಿರಸ್ಥಾಯಿ ಫಂಡ್​ ಎಂದು ಸ್ಥಾಪಿಸಿ ಅವರೇ ಅಂದು 61 ಸಾವಿರ ರೂ. ನೀಡಿ ನಾಡಿನಲ್ಲಿ ವೀರಶೈವ ಮಹಾಸಭೆ ಬೆಳೆಯಲು ಕಾರಣರಾಗಿದ್ದಾರೆ ಎಂದರು.


ಕಾರ್ಯಕ್ರಮದಲ್ಲಿ ಸಮಾಜದ ಮುಖಂಡ ಪಂಚಣ್ಣ, ಬಸವ ಕೇಂದ್ರದ ಅಧ್ಯಕ್ಷ ಸಿದ್ದಗಂಗಮ್ಮ, ಟ್ರಸ್ಟಿಗಳಾದ ಈ.ಲೋಕೇಶ್ವರಪ್ಪ, ಈಶ್ವರಯ್ಯ, ಡಿ.ವಿ.ಶಿವಾನಂದ್​, ನಾಗಭೂಷಣ, ಪ್ರದಿಪ್​, ತಿಪ್ಪೇಸ್ವಾಮಿ ಮತ್ತಿತರರು ಇದ್ದರು. ತುಮಕೂರು ತಾಲೂಕು ಕಸಾಪ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್​, ಜಯದೇವ ವಿದ್ಯಾರ್ಥಿ ನಿಲಯ ಕಾರ್ಯದರ್ಶಿ ರಾಮಕೃಷ್ಣಪ್ಪ, ಜಾಗತಿಕ ಲಿಂಗಾಯತ ಮಹಾಸಭಾದ ನಾಗಭೂಷಣ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net