

ಮುಂಡರಗಿ: ಜಗದ್ಗುರು ಅನ್ನದಾನೀಶ್ವರ ಆಂಗ್ಲ ಮಾಧ್ಯಮ ಶಾಲೆಯು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ನೀಡಿದೆ. ಶಾಲೆಯ ಸಾಧನೆಯನ್ನು ಪರಿಗಣಿಸಿ ರಾಜ್ಯ ಶಾಲಾಶಿಕ್ಷಣ ಇಲಾಖೆಯ ಆಯುಕ್ತರು ಪಾರಿತೋಷಕ ನೀಡಿ ಅಭಿನಂದಿಸಿರುವುದು ಶ್ಲಾಘನೀಯ ಎಂದು ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ.ಜವಳಿ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಜಗದ್ಗುರು ಅನ್ನದಾನೀಶ್ವರ ಸಮಿತಿಯು ಶನಿವಾರ ಹಮ್ಮಿಕೊಂಡಿದ್ದ ಬೋಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅನ್ನದಾನೀಶ್ವರ ವಿದ್ಯಾ ಸಮಿತಿಯಡಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ವೆಂಕಟಾಪುರದ ಬಸವೇಶ್ವರ ಪ್ರೌಢ ಶಾಲೆಯು ಶೇ.100ರಷ್ಟು ಫಲಿತಾಂಶ ನೀಡಿ ಸಮಿತಿಯ ಕೀರ್ತಿ ಹೆಚ್ಚಿಸಿವೆ ಎಂದರು.
ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿ, ಶಿಕ್ಷಣದಲ್ಲಿ ಹಿಂದುಳಿದಿದ್ದ ಮುಂಡರಗಿ ಸೇರಿದಂತೆ ನಾಡಿನ ವಿವಿಧ ಭಾಗಗಳಲ್ಲಿ ಶಾಲಾ, ಕಾಲೇಜುಗಳನ್ನು ಆರಂಭಿಸುವ ಮೂಲಕ ಜಗದ್ಗುರು ಅನ್ನದಾನೀಶ್ವರ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಕ್ರಾಂತಿ ಮಾಡಿದೆ. ಶಾಲಾ ಶಿಕ್ಷಣ ಇಲಾಖೆಯು ನೀಡಿರುವ ಪಾರಿತೋಷಕವು ಶಿಕ್ಷಕರ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು.
ಶಾಲಾ ಸಮಿತಿಯ ಕಾರ್ಯಾಧ್ಯಕ್ಷ ಡಾ.ಅನ್ನದಾನಿ ಮೇಟಿ ಮಾತನಾಡಿದರು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಸವರಾಜ ಬಿಸನಳ್ಳಿ, ಜಗನ್ನಾಥ ಅಳವಂಡಿ, ಅಂದಪ್ಪ ಗೋಡಿ, ಮುಖ್ಯ ಶಿಕ್ಷಕಿ ಎಸ್.ಬಿ. ಹಳ್ಳಿಗುಡಿ, ರಾಜಶೇಖರ ಕಡಿವಾಳರ, ಶಕುಂತಲಾ ಹಂಪಿಮಠ, ಗಾಯತ್ರಿ ಯಕ್ಕುಂಡಿ, ಕಮಲಾ ಉಮಚಗಿ, ಕೆ.ಎ. ಮಕಾಂದಾರ, ಜೆ.ಎ. ಮತ್ತೂರಮಠ ಇದ್ದರು.