ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬರ ಜವಾಬ್ದಾರಿ

12 Sirwar 2
Published on

ಸಿರವಾರ: ಕಾರ್ಮಿಕರು ದೇಶದ ಶಕ್ತಿಯಾಗಿದ್ದಾರೆ. ಆದರೆ, ಬಾಲ ಕಾರ್ಮಿಕತೆ ಸಮಾಜದ ಪಿಡುಗು ಆಗಿದ್ದು. ಸಾರ್ವಜನಿಕರು ಪ್ರಜ್ಞಾವಂತರಾದಾಗ ಬಾಲಕಾರ್ಮಿಕತೆಯ ಪಿಡುಗನ್ನು ತೊಡೆದು ಹಾಕಲು ಸಾಧ್ಯ ಎಂದು ತಹಸೀಲ್ದಾರ್ ಸುರೇಶ ವರ್ಮಾ ಅಭಿಪ್ರಾಯಪಟ್ಟರು.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಆಡಳಿತ, ತಾಪಂ, ಪೊಲೀಸ್, ಶಿಕ್ಷಣ ಮತ್ತು ಕಾರ್ಮಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ತಾಲೂಕಿನಲ್ಲಿ ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟಲು ಅಧಿಕಾರಿಗಳು ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು. ಬಾಲಕಾರ್ಮಿಕರು ಪತ್ತೆಯಾದಲ್ಲಿ ಅವರ ಪಾಲಕರಿಗೆ ಮನವರಿಕೆ ಮಾಡಿ ಮಕ್ಕಳನ್ನು ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಪಟ್ಟಣದಲ್ಲಿನ ಹೋಟೆಲ್, ಗ್ಯಾರೇಜ್, ಪೆಟ್ರೋಲ್ ಬಂಕ್ ಮಾಲೀಕರು, ಅಸಂಘಟಿತ ಕಾರ್ಮಿಕರು, ಕಟ್ಟಡ ಕಾರ್ಮಿಕ ಸಂಘದವರಲ್ಲಿ ಬಾಲ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುವುದು ಅಪರಾಧ ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಹಸೀಲ್ದಾರ್ ಸೂಚಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ, ವೈದ್ಯಾಧಿಕಾರಿ ಪರಿಮಳಾ ಮೈತ್ರಿ, ಸಿಡಿಪಿಒ ನಾಗರತ್ನ, ಉಪ ತಹಸೀಲ್ದಾರ್ ಸಿದ್ದನಗೌಡ, ಕಾರ್ಮಿಕ ಇಲಾಖೆ ಅಧಿಕಾರಿ ಶರಣಬಸವ, ಪ.ಪಂ.ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಮುಖ್ಯ ಶಿಕ್ಷಕ ದೇವೇಂದ್ರ ನಾಯ್ಕ, ಮಹಿಳಾ ಕರಾಟೆ ಪಟು ಮಲ್ಲಮ್ಮ ಮಲ್ಲಟ, ಕವಿತಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿ, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net