ಶಿಕ್ಷಣ ಸುಧಾರಕರು ಪುಸ್ತಕ ಬಿಡುಗಡೆ

23 vikram 10
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮುಂದಿನ ಇಪ್ಪತ್ತು ವರ್ಷಗಳನ್ನು ಊಹಿಸಿಕೊಂಡರೆ ಕನ್ನಡ ಭಾಷೆ ಎಲ್ಲಿ ಇರುತ್ತದೆ ಎಂಬ ಕಾಲ ಘಟ್ಟವನ್ನು ನಾವು ಈಗಾಗಲೇ ತಲುಪಿದ್ದೇವೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಸರ್ಕಾರವೇ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿರುವುದು ವಿಷಾದನೀಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಪ ಪುರುಷೋತ್ತಮ ಬಿಳಿಮಲೆ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪನಾ ದಿನ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಶಿಕ್ಷಣ ಸುಧಾರಕರು ಪುಸ್ತಕ ಬಿಡುಗಡೆ, ಶಿಕ್ಷಣ ಸಂಸ್ಥೆ ಸ್ಮರಣೆ: ಕರ್ನಾಟಕ ಶಿಕ್ಷಣ ಸಂಸ್ಥೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡಕ್ಕಾಗಿ ನಾವು ಹೋರಾಟ ರೂಪಿಸುವ ಸ್ಥಳ ಯಾವುದಾದರೂ ಇದ್ದರೆ ಅದು ಕರ್ನಾಟಕ ವಿದ್ಯಾವರ್ಧಕ ಸಂಘ. ನೂರಾರು ಜನ ಧಾರವಾಡವನ್ನು ಕೇಂದ್ರವಾಗಿಟ್ಟುಕೊಂಡು ಕನ್ನಡ ಕಟ್ಟಿದ್ದಾರೆ. ಆದರೆ, ಅನ್ನದ ಭಾಷೆಯನ್ನಾಗಿ ಇಂಗ್ಲಿಷ ಸ್ಥಾನ ಪಡೆದಿದೆ. ಈ ನಡುವೆ ಶೇ.66ರಷ್ಟು ವೇಗದಲ್ಲಿ ಹಿಂದಿ ಭಾಷೆ ಬೆಳೆಯುತ್ತಿದೆ. ಕನ್ನಡ ಕಳೆದ 40 ವರ್ಷಗಳಲ್ಲಿ ಶೇ.3.7 ರಷ್ಟು ಮಾತ್ರ ಬೆಳೆದಿದ್ದು ದುರದೃಷ್ಟಕರ ಸಂಗತಿ. ಕನಿಷ್ಟ ಕನ್ನಡ ಭಾಷೆ ಬಗ್ಗೆ ನಮ್ಮ ಮನಸ್ಸು ಕರಗುವ ಹಂತ ತಲುಪಿದೆ ಎಂದರು.
ಪ್ರೊ. ವೀರಣ್ಣ ರಾಜೂರ ಮಾತನಾಡಿ, ಇಂದು ಕನ್ನಡ ಶೋಚನೀಯ ಸ್ಥಿತಿಯಲ್ಲಿದೆ. ಆರಂಭದಲ್ಲಿ ಮರಾಠಿ ಭಾಷೆಯಿಂದ ಕನ್ನಡ ಉಳಿಸಿಕೊಳ್ಳಲು ಹೋರಾಟ ಮಾಡಿದರೆ, ಇಂದು ಇಂಗ್ಲಿಷ ಹಾವಳಿ ಹಾಗೂ ಹಿಂದಿ ಹೇರಿಕೆಯಿಂದ ಕನ್ನಡ ಉಳಿಸಲು ಹೋರಾಟ ಮಾಡುವ ಸ್ಥಿತಿ ಎದುರಾಗಿದೆ. ಈ ಕುರಿತು ಚಿಂತಿಸುವ ಅಗತ್ಯವಿದೆ ಎಂದರು.
ಶಿಕ್ಷಣ ಸಂಸ್ಥೆ ಸ್ಮರಣೆ: ಕರ್ನಾಟಕ ಶಿಕ್ಷಣ ಸಂಸ್ಥೆ ಕುರಿತು ಉಪನ್ಯಾಸಕ ಸಂಗಮೇಶ ಹಡಪದ ಮಾತನಾಡಿದರು. ಚಂದ್ರಕಾಂತ ಬೆಲ್ಲದ, ಪ್ರೊ.ಮಾಲತಿ ಪಟ್ಟಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಪ್ರೊ. ಧನವಂತ ಹಾಜವಗೋಳ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net