

ಬ್ಯಾಡಗಿ: ದೇಶದ ಹೊಸ ಪೀಳಿಗೆಗೆ ಔದ್ಯೋಗಿಕ ಬದುಕು ಕಟ್ಟಿಕೊಳ್ಳುವ ಮೂಲಕ ಅಭಿವೃದ್ಧಿ ಹೆಜ್ಜೆ ಹಾಕಲು ಶಿಕ್ಷಣ ಪ್ರಮುಖವಾಗಿದ್ದು, ವ್ಯಕ್ತಿಯ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ಬೀರಲಿದೆ ಎಂದು ಉದ್ಯಮಿ ನಾಗರಾಜ ಆನ್ವೇರಿ ತಿಳಿಸಿದರು.
ತಾಲೂಕಿನ ಮೋಟೆಬೆನ್ನೂರಿನ ನವೋದಯ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಣವು ಜ್ವಲಂತ ಸಮಸ್ಯೆಗಳ ಸವಾಲು ಎದುರಿಸುವ ಸಾಧನವಾಗಬೇಕೆ ವಿನಃ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ದೌರ್ಬಲ್ಯವಾಗಬಾರದು. ದೇಶದ ಯುವಕರು ಸಂಪೂರ್ಣ ಶಿಕ್ಷಣವಂತರಾಗುವುದರಿಂದ ಭೂಮಿಯ ಮೇಲೆರೆಗುವ ಎಲ್ಲ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಸಾಮರ್ಥ್ಯವನ್ನು ಪಡೆದುಕೊಳ್ಳಲಿದ್ದಾರೆ. ಗ್ರಾಮೀಣ ಪ್ರದೇಶದ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡಿದರೂ ಇಂದಿಗೂ ಬಹುತೇಕ ಪೂರಕ ಶಿಕ್ಷಣ ದೊರೆತಿಲ್ಲ. ಕೇವಲ ಅಕ್ಷರ ಜ್ಞಾನ ಹಾಗೂ ಜೀವನ ಮಟ್ಟಕ್ಕೆ ಮಾತ್ರ ಶಿಕ್ಷಣ ಕಲಿಸಲಾಗುತ್ತಿದ್ದು, ಗ್ರಾಮೀಣ ಮಟ್ಟದ ಶಾಲೆಗಳಲ್ಲಿ ಉದ್ಯೋಗ ಆಧಾರಿತ ಹಾಗೂ ಗುಡಿ ಕೈಗಾರಿಕೆ, ಗೃಹ ಕೈಗಾರಿಕೆಯಂತಹ ಶಿಕ್ಷಣ ಅಗತ್ಯವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಬಸವರಾಜ ಹಾವೇರಿಮಠ ಅಧ್ಯಕ್ಷತೆ ವಹಿಸಿದ್ದರು. ವರ್ತಕ ಕುಮಾರಗೌಡ ಪಾಟೀಲ, ಪ್ರಕಾಶ ಬನ್ನಿಹಟ್ಟಿ, ವಿಜಯಭರತ ಬಳ್ಳಾರಿ, ಅಶೋಕ ಬಣಕಾರ, ಮಲ್ಲಿಕಾರ್ಜುನ ಬಳ್ಳಾರಿ ಮೃತ್ಯುಂಜಯ ಲಕ್ಕಣ್ಣನವರ, ಶಿವಪುತ್ರಪ್ಪ ಅಗಡಿ, ರೇವಣೆಪ್ಪ ದಿಡಗೂರ, ಎಸ್.ಎಂ. ಪಾಟೀಲ, ರಮೇಶ ಬಳ್ಳಾರಿ, ಯು.ಎಸ್. ರುದ್ರದೇವರಮಠ, ಎನ್.ಎಸ್. ಹಾವನೂರ, ಆರ್.ಆರ್. ಕುಂಠೆ, ಡಾ.ಪ್ರೇಮಾನಂದ ಲಕ್ಕಣ್ಣನವರ, ವಸಂತ ಕನ್ನಮ್ಮನವರ ಇದ್ದರು.