ವಿಕಸನಕ್ಕೆ ದಾರಿಯಾಗುವ ಶಿಕ್ಷಣ ಬರಬೇಕು: ಡಾ.ವಸಂತಶಾಸ್ತ್ರಿ

Walkathan
Published on

ಚಿಕ್ಕಮಗಳೂರು: ಶಿಕ್ಷಣವು ಮನುಷ್ಯನ ಒಳಗಿರುವ ವಿಕಸನಕ್ಕೆ ದಾರಿ ಮಾಡಿಕೊಡಬೇಕು ಎನ್ನುವುದನ್ನು ವಿವೇಕಾನಂದರು ಹೇಳಿದ್ದು, ಈ ರೀತಿಯ ಶಿಕ್ಷಣ ವ್ಯವಸ್ಥೆಯನ್ನು ಮುಂದೆ ಜಾರಿಗೆ ತರುವ ಅಗತ್ಯವಿದೆ ಎಂದು ಶ್ರೀಸಾಯಿ ಏಂಜಲ್ಸ್ ಕಾಲೇಜು ಉಪ ಪ್ರಾಚಾರ್ಯ ಡಾ.ವಸಂತಶಾಸ್ತ್ರಿ ಹೇಳಿದರು. 

ಸ್ವಾಮಿ ವಿವೇಕಾನಂದರ 158ನೇ ಜನ್ಮದಿನಾಚರಣೆ ಅಂಗವಾಗಿ ಸಮರ್ಥ ಭಾರತ ಸಂಘಟನೆ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ವಾಕಥಾನ್ ಜಾಥಾದಲ್ಲಿ ಮಾತನಾಡಿದರು.

ಆದರ್ಶ ಪ್ರತಿಪಾದನೆ:
ವಿವೇಕಾನಂದರು ಮಹಾಭಾರತದ ಕೌಶಿಕನ ಕತೆಯ ಮೂಲಕ ತ್ಯಾಗ ಮತ್ತು ಸೇವೆಯ ಆದರ್ಶಗಳನ್ನು ಪಶ್ಚಿಮದ ಜಗತ್ತಿಗೆ ಬಹಳ ಸುಂದರವಾಗಿ ಹೇಳುತ್ತ ಎರಡು ಅದ್ಭುತಗಳನ್ನು ಭಾರತದ ಮುಂದೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ಏಳಿಗೆಗಾಗಿ ಸದಾ ನಮ್ಮನ್ನು ನಾವು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.

ಸೇವೆಯ ಬಗ್ಗೆ ಹೇಳಿದ್ದರು:
ಅನಾರೋಗ್ಯ ಪೀಡಿತ ತಂದೆ ತಾಯಿಯ ಸೇವೆ ಮಾಡಿ ಸತ್ಯ ಸಾಕ್ಷಾತ್ಕಾರ ಪಡೆದ ಕಾರಣಕ್ಕೆ ಮುಕ್ತಿ ದೊರೆತ ನಿದರ್ಶನದ ಕಥೆಗಳ ಮೂಲಕ ವಿವೇಕಾನಂದರು ಸೇವೆಯ ಬಗ್ಗೆ ಹೇಳಿದ್ದರು. ಆದರೆ ಪಾಲಕರನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಯುವಕರ ಮನಸ್ಥಿತಿ ಬದಲಾಗಿ ಸೇವೆಯ ಆದರ್ಶ ಬೇಕಾಗಿದೆ ಎಂದರು.

ದೇಶದ ಶಕ್ತಿ ಎತ್ತಿ ಹಿಡಿದವರು:
ವಾಕಥಾನ್ ಉದ್ಘಾಟಿಸಿದ ಜಿಪಂ ಉಪಾಧ್ಯಕ್ಷ ಬಿ.ಜೆ.ಸೋಮಶೇಖರಪ್ಪ ಮಾತನಾಡಿ, ಭಾರತದ ಹಿಂದು ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಎತ್ತಿ ಹಿಡಿದ ಶಕ್ತಿ ಸ್ವಾಮಿ ವಿವೇಕಾನಂದ. ಯುವಕರ ಆದರ್ಶಪ್ರಾಯವಾದ ಇವರ ಜನ್ಮ ದಿನದಂದು ವಾಕಥಾನ್ ಮಾಡುವ ಮೂಲಕ ಅವರ ಹಾದಿಯನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಲು ಸಹಕಾರಿಯಾಗುತ್ತದೆ. ಈ ಮೂಲಕ ಬಲಿಷ್ಠ ರಾಷ್ಟ್ರ ಕಟ್ಟಬಹುದು ಎಂದರು.

ಮುಖ್ಯರಸ್ತೆಯಲ್ಲಿ ಮೆರವಣಿಗೆ:
ನಗರದ ಜಾಲಿ ಫ್ರೆಂಡ್ಸ್ ವೃತ್ತದಿಂದ ಬಸವನಹಳ್ಳಿ ಮುಖ್ಯರಸ್ತೆ, ಎಂಜಿ ರಸ್ತೆ ಮೂಲಕ ಸಾಗಿದ ಮೆರವಣಿಗೆ ಅಜಾದ್ ಪಾರ್ಕ್ ನಲ್ಲಿ ಸಂಪನ್ನಗೊಂಡು ಸಭೆ ನಡೆಸಲಾಯಿತು.

ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ಕಿರಣ್, ಅರವಿಂದ್, ತನ್ಮಯಿ ಪ್ರೇಮ್‍ಕುಮಾರ್, ಡಾ.ವಿಶಾಖ, ಪವಿತ್ರ, ಶಬರೀಶ್, ಶಶಿ ಆಲ್ದೂರು, ಶಶಾಂಕ್, ಗುರು, ಸೂರ್ಯ, ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವೀಣಾಶೆಟ್ಟಿ, ವರಸಿದ್ಧಿ ವೇಣುಗೋಪಾಲ್, ಎಚ್.ಡಿ.ತಮ್ಮಯ್ಯ, ಅನಿಲ್‍ಕುಮಾರ್ ನಿವೇದಿತಾ ಪ್ರತಿಷ್ಠಾನ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರು ಜಾಥಾದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net