

ಮೈಸೂರು: ಆಧುನಿಕ ಜ್ಞಾನವನ್ನು ಮೌಲ್ಯಗಳೊಂದಿಗೆ ಸಂಯೋಜಿಸುವ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ ಎಂದು ರಾಜ್ಯಪಾಲ ಥಾವರ ಚಂದ್ ಗೆಹಲೋತ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ 104ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಧರ್ಮ-ಸಂಸ್ಕೃತಿ ಸಂರಕ್ಷಿಸಲು, ರಾಷ್ಟ್ರದ ಏಕತೆ- ಸಮಗ್ರತೆ ಕಾಪಾಡಿಕೊಳ್ಳಲು, ಸಮಾಜದಲ್ಲಿ ಸಮಾನತೆ-ಸೌಹಾರ್ದತೆ ಕಾಪಾಡಿಕೊಳ್ಳಲು ಶಿಕ್ಷಣ ಸಹಕಾರಿ ಆಗಿದೆ. ಜತೆಗೆ, ಜಗತ್ತಿಗೆ ಹೊಸ ದಿಕ್ಕನ್ನು ನೀಡುವುದರೊಂದಿಗೆ ಇಡೀ ಮಾನವಕುಲದ ಕಲ್ಯಾಣಕ್ಕೂ ನೆರವಾಗಲಿದೆ ಎಂದು ಹೇಳಿದರು.
ದೇಶೀಯ ಸಂಸ್ಕೃತಿ ಯಾವಾಗಲೂ ವಿಶ್ವ ಭ್ರಾತೃತ್ವ, ವಿಶ್ವ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ. ವೇದ ಕಾಲದಿಂದ ಇಂದಿನವರೆಗೂ ಭಾರತೀಯರು ಎಲ್ಲ ಕ್ಷೇತ್ರಗಳಲ್ಲಿ ಅನುಪಮವಾದ ಜ್ಞಾನ ಸಂಪಾದಿಸಿದ್ದಾರೆ. ಖಗೋಳ ವಿಜ್ಞಾನದಿಂದ ಭೂವಿಜ್ಞಾನ, ಗಣಿತ, ವೈದ್ಯಕೀಯ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಭಾರತೀಯರ ಕೊಡುಗೆ ಇಡೀ ಜಗತ್ತಿಗೆ ಮಹತ್ವದ್ದಾಗಿದೆ ಎಂದರು.
ಭಾರತೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಬಹಳ ಪುರಾತನವಾಗಿದೆ. ಇದು ಪ್ರಾಚೀನ ಕಾಲದಿಂದಲೂ ‘ವಸುದೈವ ಕುಟುಂಬಕಂ’ ತತ್ವಶಾಸ್ತ್ರ ಮತ್ತು ಧ್ಯಾನದ ಮೇಲೆ ಕೇಂದ್ರೀಕೃತವಾಗಿದೆ. ‘ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ’ ಎಂಬ ಮನೋಭಾವದಿಂದ ಪ್ರೇರಿತವಾಗಿದೆ ಎಂದರು.
ಸ್ವಾತಂತ್ರ್ಯದ ನಂತರ ಭಾರತವು ಎಲ್ಲ ಕ್ಷೇತ್ರಗಳಲ್ಲೂ ಅಭೂತಪೂರ್ವ ಪ್ರಗತಿ ಸಾಧಿಸಿದೆ. ದೇಶದ ಆರ್ಥಿಕತೆಯು ಪ್ರಬಲವಾಗಿದೆ. ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಿದೆ. ಮತ್ತಷ್ಟು ಬಲಪಡಿಸುವ ಮೂಲಕ ವಿಶ್ವದ ಅತಿದೊಡ್ಡ ಆರ್ಥಿಕತೆ ದೇಶವಾಗಿ ಮಾಡಬೇಕಿದೆ ಎಂದರು.
ಇದೀಗ ಪರಿಸರ ಅಸಮತೋಲನ ಜಗತ್ತಿನಲ್ಲಿ ಗಂಭೀರ ಸಮಸ್ಯೆಯಾಗಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ. ನೀರು, ಅರಣ್ಯ ಮತ್ತು ವಾಯು ಸಂರಕ್ಷಣೆಗೆ ಹೆಚ್ಚಿನ ಕೆಲಸ ಮಾಡುವ ಅಗತ್ಯ ಇದೆ ಎಂದರು.
ಮೈಸೂರು ವಿಶ್ವವಿದ್ಯಾಲಯವು ಈ ದೇಶಕ್ಕೆ ಅನೇಕ ವಿಜ್ಞಾನಿಗಳು, ತತ್ವಜ್ಞಾನಿಗಳು, ರಾಜಕಾರಣಿಗಳನ್ನು ನೀಡಿದೆ. ಅವರು ರಾಜ್ಯ, ರಾಷ್ಟ್ರದ ನಿರ್ಮಾಣದಲ್ಲಿ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.