

ನ್ಯಾಮತಿ: ವಿದ್ಯೆಯೊಂದಿಗೆ ವಿನಯ, ಪರೋಪಕಾರ, ಸದ್ವಿಚಾರಗಳು ರಾಷ್ಟ್ರೀಯ ಸೇವಾ ಯೋಜನಾ ಶಿಬಿರದಲ್ಲಿ ತೊಡಗಿಸಿಕೊಂಡವರಲ್ಲಿ ಕಂಡುಬರುತ್ತವೆ ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸಾಹಿತಿ ಕತ್ತಿಗೆ ಚನ್ನಪ್ಪ ಹೇಳಿದರು.
ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಕತ್ತಿಗೆ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ. ತಿಮ್ಮನಗೌಡ ಮಾತನಾಡಿ, ಎನ್ನೆಸ್ಸೆಸ್ ಚಟುವಟಿಕೆಗಳು ವಿದ್ಯಾರ್ಥಿಗಳ, ಯುವಜನರ ಬದುಕು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಪತ್ರಕರ್ತ ಎಂ.ಎಸ್. ಶಾಸ್ತ್ರೀಹೊಳೆಮಠ್ ಮಾತನಾಡಿ, ಮಾನವೀಯ ಮೌಲ್ಯಗಳು ಮರೆತು ಹೋಗುತ್ತಿರುವ ಈ ಕಾಲಘಟ್ಟದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಜೀವನದ ಪಾಠ ಹೇಳಿಕೊಡುವ ಮೂಲಕ ಮಾನವೀಯತೆ ಯನ್ನು ನೆನಪಿಸುತ್ತಿದೆ ಎಂದು ಹೇಳಿದರು.
ಪ್ರಾಚಾರ್ಯು ಡಾ.ಟಿ.ಸಿ. ಭಾರತಿ ಮಾತನಾಡಿ, ಯಾವುದೇ ಲಾಭದ ನಿರೀಕ್ಷೆ ಇಲ್ಲದೆ ವಿದ್ಯಾರ್ಥಿಗಳು ಎನ್ನೆಸ್ಸೆಸ್ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎಂದರು.
ಜಿಲ್ಲಾ ಗ್ರಾಮೀಣ ಸಿರಿ ಪ್ರಶಸ್ತಿ ಪುರಸ್ಕೃತ ಬಿ. ಚಂದ್ರಕಲಾ ಧರ್ಮಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಸ್. ಗಿರೀಶ್ ಮಾತನಾಡಿದರು. ವಾರ್ಷಿಕ ವಿಶೇಷ ಶಿಬಿರಾರ್ಥಿಗಳಾದ ಸತೀಶ್, ಪವನ್ ಕುಮಾರ್, ಅಶ್ವಿನಿ, ಸಂಗೀತಾ ಅನುಭವ ಹಂಚಿಕೊಂಡರು.
ಜನಪದ ನಾಟಿ ವೈದ್ಯ ಪ್ರಶಸ್ತಿ ಪುರಸ್ಕೃತ ಎಂ. ಪುಟ್ಟಮಲ್ಲಪ್ಪ ಮಳನಾಯಕರ, ಜಿಲ್ಲಾ ಗ್ರಾಮೀಣ ಸಿರಿ ಪ್ರಶಸ್ತಿ ಪುರಸ್ಕೃತ ಬಿ. ಜಯಮ್ಮ ಲೋಕೇಶ್ವರಪ್ಪ, ಬಿ. ರುದ್ರಮ್ಮ ಹನುಮಪ್ಪ, ಮುಖಂಡ ಕರಿಬಸಪ್ಪ ಪಟೇಲ್, ರಾಜ್ಯ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಜಿ.ಪಿ. ರಾಘವೇಂದ್ರ, ಶಿಬಿರ ಅಧಿಕಾರಿ ಎಸ್.ಎಚ್. ಚಂದ್ರಪ್ಪ ಸೇರಿ ಇತರರು ಇದ್ದರು.