

ಬೆಂಗಳೂರು: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರವಾಗುತ್ತಿರುವಂತೆಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಈ ಬಾರಿ ಪರೀಕ್ಷೆ ಹಾಜರಾಗುವ ಮಕ್ಕಳ ಮನೆಗೆ ಭೇಟಿ ನೀಡಿ, ಅವರು ಮಾಡಿಕೊಂಡಿರುವ ಸಿದ್ಧತೆ ಕುರಿತು ಅರಿಯುವ ವಿಶೇಷ ಅಭಿಯಾನ ಆರಂಭಿಸಲಿದ್ದಾರೆ.
ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಡೆಸುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.27ರಿಂದ ಏ.9ರವರೆಗೆ ನಡೆಯಲಿದ್ದು, ರಾಜ್ಯಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಬಹುಮುಖ್ಯ ಆಗಿರುವುದರಿಂದ ಅವರಲ್ಲಿನ ಪರೀಕ್ಷಾ ಭಯ ಹೋಗಲಾಡಿಸುವುದು ಮತ್ತು ಪಠ್ಯಕ್ರಮ ಬೋಧನೆ ಸಂಪೂರ್ಣವಾಗಿರುವ ಕುರಿತು ಮಕ್ಕಳಿಂದಲೇ ಮಾಹಿತಿ ಸಂಗ್ರಹಿಸಲು ಸಚಿವರು ಮುಂದಾಗಿದ್ದಾರೆ.
ಪರೀಕ್ಷೆ ಆರಂಭವಾಗುವ ಮುನ್ನ ತಮ್ಮ ರಾಜಾಜಿನಗರ ಕ್ಷೇತ್ರದಲ್ಲಿರುವ 350ಕ್ಕೂ ಹೆಚ್ಚಿನ ಮಕ್ಕಳ ಮನೆಗೆ ಭೇಟಿ ನೀಡುವುದಾಗಿ ಸುರೇಶ್ಕುಮಾರ್ ತಿಳಿಸಿದ್ದಾರೆ.