

ನಂದಗುಡಿ : ರಾಜ್ಯದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕದ ವಿಷಯವಾದರೂ, ಮಹಾರಾಷ್ಟ್ರ ಹಾಗೂ ಕೇರಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಕಡಿಮೆ ಪ್ರಮಾಣದಲ್ಲಿದೆ. ಹಾಗಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸಲು ಸಿದ್ಧತೆ ನಡೆಸಿಕೊಳ್ಳಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಕಿವಿಮಾತು ಹೇಳಿದರು.
ನಂದಗುಡಿ ಹೋಬಳಿಯ ತಾವರೆಕೆರೆ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆಯುವ ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಆಯ್ಕೆಯಾಗಿರುವ 10ನೇ ತರಗತಿ ವಿದ್ಯಾರ್ಥಿ ಮನೋಜ್‌ಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಪ್ರಧಾನಿ ನಡೆಸುವ ವಿಶೇಷ ಕಾರ‌್ಯಕ್ರಮಕ್ಕೆ ರಾಜ್ಯದ ಇಬ್ಬರು ವಿದ್ಯಾರ್ಥಿಗಳಾದ ಉಡುಪಿ ತಾಲೂಕಿನ ಅನುಷಾ ಹಾಗೂ ಹೊಸಕೋಟೆ ತಾಲೂಕಿನ ಮನೋಜ್ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ನರೇಂದ್ರ ಮೋದಿ ಅವರು ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿ ಪರೀಕ್ಷೆ ಬಗ್ಗೆ ಇರುವ ಭಯ ಹೋಗಲಾಡಿಸಲು ಕಾರ‌್ಯಕ್ರಮ ಆಯೋಜಿಸುತ್ತಾರೆ ಎಂದರು.
ಸಾಮಾನ್ಯ ಕುಟುಂಬದಿಂದ ಬಂದಿರುವ ಮಕ್ಕಳು ನಮ್ಮ ಭವಿಷ್ಯದ ಗುರುತು. ಈ ವಿದ್ಯಾರ್ಥಿಯಂತೆ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ರಾಜ್ಯದ ಜನತೆ ನೋಡುತ್ತಾರೆ ಎಂದು ವಿದ್ಯಾರ್ಥಿ ಮನೋಜ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲೆಡೆ ಕರೊನಾ ಹೆಚ್ಚಾಗುತ್ತಿಲ್ಲ, ಸಾರ್ವಜನಿಕರು ಕರೊನಾ ಹೆಚ್ಚು ಮಾಡುತ್ತಿದ್ದಾರೆ. ಎಲ್ಲ ರೀತಿಯ ಮಾರ್ಗಸೂಚಿ ಪಾಲಿಸಲು ಸೂಚಿಸಿದ್ದರೂ ಯಾರೂ ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರಿ ಶಾಲಾ ಮಕ್ಕಳು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ರೀತಿ ರಾಜ್ಯಕ್ಕೆ ಮಾದರಿಯಾಗಿದೆ. ನಾಗರಿಕರು ಸರ್ಕಾರದ ನಿಯಮಗಳನ್ನು ಧಿಕ್ಕರಿಸುತ್ತಿರುವುದರಿಂದ ಕರೊನಾ ಇನ್ನೂ ಜೀವಂತವಾಗಿದೆ. ಮುಂದಿನ ದಿನಗಳಲ್ಲಿ ಕರೊನಾ ಜತೆ ನಾವು ಜೀವಿಸಲು ಕಲಿಯಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಲಲಿತಮ್ಮ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ, ಮುಖ್ಯಶಿಕ್ಷಕ ಕೃಷ್ಣಕುಮಾರ್, ಗ್ರಾಪಂ ಅಧ್ಯಕ್ಷ ಬಸವಪ್ರಕಾಶ್ ಹಾಗೂ ಶಾಲಾ ಶಿಕ್ಷಕರು ಇದ್ದರು.