ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ : ಶಿಕ್ಷಣ ಸಚಿವ ಸುರೇಶ್ ಕುಮಾರ್

22 Madhu 1
Published on

ಮಧುಗಿರಿ : ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮುಂದಿನ 4 ವರ್ಷಗಳಲ್ಲಿ ಹೊಸ ಯೋಜನೆಗಳ ಮೂಲಕ ಸರ್ಕಾರಿ ಶಾಲೆಗಳ ಸಂಪೂರ್ಣ ಚಿತ್ರಣ ಬದಲಾಯಿಸುವ ಚಿಂತನೆಯಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.

ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶತವಾನೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ, ಕಟ್ಟಡ ಉದ್ಘಾಟನೆ ಹಾಗೂ ಹಳೆಯ ವಿದ್ಯಾರ್ಥಿಗಳ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಬಡವರು ದುಬಾರಿ ಹಣ ತೆತ್ತು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ಶಿಕ್ಷಣ ಕೊಡಿಸುತ್ತಿದ್ದು, ಇದಕ್ಕಾಗಿ ದುಡಿಮೆಯ ಶೇ.40 ಹಣ ವ್ಯಯಿಸುತ್ತಿದ್ದಾರೆ. ಇದರ ಅರಿವು ನನಗಿದ್ದು, ಇದಕ್ಕಾಗಿ ಸರ್ಕಾರಿ ಶಾಲೆಗಳ ಏಳಿಗೆಗೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ-2019 ಅನ್ವಯ ಮುಂದಿನ ದಿನಗಳಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ 53 ಸಾವಿರ ಸರ್ಕಾರಿ ಶಾಲೆಗಳಿದ್ದು, ಇತರೆ ಇಲಾಖೆಗಳಿಗಿಂತ ಇಂದು ಶಿಕ್ಷಣ ಇಲಾಖೆ ನಕಾರಾತ್ಮಕ ವಿಷಯಗಳಿಗೆ ಹೆಚ್ಚಾಗಿ ಸುದ್ದಿಯಾಗುತ್ತಿದೆ. ಶೇ.10 ರಷ್ಟು ಕೆಟ್ಟ ಶಿಕ್ಷಕರಿಂದಾಗಿ, ಶೇ. 90 ರಷ್ಟು ಉತ್ತಮ ಶಿಕ್ಷಕರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮದ ಶೃಂಗಾರ ವನದಲ್ಲಿ ಸರ್ಕಾರಿ ಭೂಮಿಯಿದ್ದು, ಈ ಸ್ಥಳವನ್ನು ಸರ್ವೇ ವಾಡಿಸಿ ಮಹಾತ್ಮ ಗ್ರೂಪ್‌ಗೆ ಹಸ್ತಾಂತರಿಸಿದಲ್ಲಿ, ಅಲ್ಲಿ ಶಾಲೆಯನ್ನು ನಿರ್ಮಿಸುವುದಾಗಿ ಸಹಕಾರ ಸಂಗಳ ನಿವೃತ್ತ ಸಹಾಯಕ ನಿಬಂಧಕ ಮುರಳಿಕೃಷ್ಣ ಮನವಿ ಸಲ್ಲಿಸಿದಾಗ, ತಕ್ಷಣ ಸ್ಪಂದಿಸಿದ ಸಚಿವರು ಈ ಸ್ಥಳವನ್ನು ಗುರುತಿಸಿಕೊಡುವಂತೆ ತಹಸೀಲ್ದಾರ್ ಎಲ್.ಎಂ ನಂದೀಶ್‌ಗೆ ಸೂಚಿಸಿದರು.

ಶಾಸಕ ಎಂ.ವಿ. ವೀರಭದ್ರಯ್ಯ ವಾತನಾಡಿ, ತಾಲೂಕಿನಲ್ಲಿ ಬಹಳಷ್ಟು ಶಾಲೆಗಳು ದುಸ್ಥಿತಿಯಲ್ಲಿದ್ದು, ಶಿಥಿಲಗೊಂಡ ಶಾಲೆಗಳನ್ನು ತೆರವುಗೊಳಿಸಿ ನೂತನ ಶಾಲೆಗಳನ್ನು ನಿರ್ಮಿಸಬೇಕಿದೆ. ಹೀಗಾಗಿ ಸಚಿವರು ತಾಲೂಕಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಿದರು. ತಾಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಸದಸ್ಯ ಸೊಸೈಟಿ ರಾಮಣ್ಣ, ಗ್ರಾಪಂ ಅಧ್ಯಕ್ಷೆ ಮಂಜಮ್ಮ ಅಶ್ವತ್ಥನಾರಾಯಣ್, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕಿ ಸುವರ್ಣಮ್ಮ, ಪುರಸಭೆ ಸದಸ್ಯ ಎಂ.ಆರ್. ಜಗನ್ನಾಥ್, ತಾಪಂ ಇಒ ದೊಡ್ಡಸಿದ್ದಪ್ಪ, ಡಿಡಿಪಿಐ ಎಂ. ರೇವಣಸಿದ್ದಪ್ಪ, ಬಿಇಒ ರಂಗಪ್ಪ, ಡಯಟ್ ಪ್ರಾಂಶುಪಾಲ ವೈ.ಎನ್. ರಾಮಕೃಷ್ಣಯ್ಯ, ಡಿವೈಪಿಸಿಎಸ್ ರಾಜ್‌ಕುವಾರ್, ಬಿಆರ್‌ಸಿ ಆನಂದ್‌ಕುವಾರ್, ನೌಕರರ ಸಂದ ಅಧ್ಯಕ್ಷ ವಿ.ಎಚ್. ವೆಂಕಟೇಶಯ್ಯ, ಖಜಾಂಚಿ ಚಿಕ್ಕರಂಗಯ್ಯ, ಪಿಡಿಒ ಗೌಡಪ್ಪ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಜಯರಾಮಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ

ನಾರಾಯಣ್ ರಾವ್ ಇತರರು ಉಪಸ್ಥಿತರಿದ್ದರು.

ಛಲ ಬಿಡದ ತ್ರಿವಿಕ್ರಮರು: ಸಿದ್ದಾಪುರ ಗ್ರಾಮಸ್ಥರು ಛಲ ಬಿಡದ ತ್ರಿವಿಕ್ರಮರು. ನನಗೆ ಕಾರ್ಯಕ್ರಮಕ್ಕೆ ಬರಲೇಬೇಕೆಂದು ಒತ್ತಡ ಹೇರಿ ಯಶಸ್ವಿಯಾಗಿದ್ದಾರೆ. ಶಾಲೆ ಬಗ್ಗೆ ಗ್ರಾಮಸ್ಥರ ಕಾಳಜಿ ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳಿಂದಾಗಿ ನನ್ನ ಉತ್ಸಾಹ ಇಮ್ಮಡಿಗೊಳ್ಳುತ್ತದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಶಿಕ್ಷಕ ದಂಪತಿಗೆ ಸನ್ಮಾನ: ಮಧುಗಿರಿಯ ಶಿಕ್ಷಕ ದಂಪತಿ ಣೀಂದ್ರನಾಥ್ ಮತ್ತು ಇಂದ್ರಮ್ಮ ಅವರನ್ನು ಸನ್ಮಾನಿಸಿದ ಸಚಿವರು, ಶಾಲೆ ಮುಗಿದ ನಂತರ ರಸ್ತೆಯ ಗುಂಡಿಗಳನ್ನು ಮುಚ್ಚುವುದರ ಜತೆಗೆ ಸ್ಮಶಾನ ಸ್ವಚ್ಛತೆ ಕೈಗೊಂಡಿದ್ದ ದಂಪತಿ ನಮ್ಮ ಇಲಾಖೆಯಲ್ಲಿರುವುದು ಹೆಮ್ಮೆ ಎಂದು ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯಶಿಕ್ಷಕಿಯಲ್ಲಿ ತಾಯಿ ಕಂಡೆ : ಸಿದ್ದಾಪುರ ಶಾಲೆ ಮುಖ್ಯಕ್ಷಕಿ ಎಂ.ಜಿ.ಕಾಂತಮ್ಮ ಶಾಲೆಯ ಬಗ್ಗೆ ಶಿಸ್ತುಬದ್ಧ ವರದಿ ಮಂಡಿಸಿದ್ದು, ಅವರಲ್ಲಿ ನನ್ನ ತಾಯಿಯನ್ನು ಕಂಡಿದ್ದೇನೆ. ಶಾಲೆಗೆ ಹೆಚ್ಚುವರಿ ಕೊಠಡಿಗಳ ಬೇಡಿಕೆಯನ್ನು ಅವರು ಮಂಡಿಸಿದ್ದಾರೆ. ಡಿಡಿಪಿಐ ಜತೆಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವೆ ಎಂದು ಸಚಿವರು ಭರವಸೆ ನೀಡಿದರು.

ನೂತನ ಯೋಜನೆಗಳನ್ನು ರೂಪಿಸಲು ಗ್ರಾಮವಾಸ್ತವ್ಯ ಉತ್ತಮ ವೇದಿಕೆ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳು ಜೀವನದುದ್ದಕ್ಕೂ ಶಿಸ್ತನ್ನು ರೂಢಿಸಿಕೊಂಡಿದ್ದು, ಭಾರತ ಮಾತೆಗೆ ವಿರುದ್ಧವಾಗಿ ಜಿಂದಾಬಾದ್ ಹೇಳುವುದಿಲ್ಲ.

ಸುರೇಶ್ ಕುಮಾರ್, ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net