

ಕೊಪ್ಪಳ:ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿನ ಗೊಂದಲಗಳನ್ನು ಶೀಘ್ರ ಪರಿಹಾರ ಮಾಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಆದೇಶ ನೀಡುವ ಸಂಬಂಧ ಅ.25ರಂದು ಕಾನೂನು ಸಲಹೆಗಾರರೊಂದಿಗೆ ಸಭೆ ನಡೆಸಿ ನಿರ್ಧರಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ನೇಮಕಾತಿ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದೆ. ಮೊನ್ನೆಯಷ್ಟೇ ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಬಾಕಿ ಜಿಲ್ಲೆಯ ಅಭ್ಯರ್ಥಿಗಳಿಗೆ ಆದೇಶ ಪತ್ರ ನೀಡಲು ನಿರ್ದೇಶನ ಬಂದಿದೆ.
ಬಂದ ತಕ್ಷಣ ಕೌನ್ಸಲಿಂಗ್ ನಡೆಸಿ ನೇಮಕಾತಿ ಆದೇಶ ನೀಡುತ್ತಿದ್ದೇವೆ. ಬಾಕಿ ಜಿಲ್ಲೆಗಳ ಅಭ್ಯರ್ಥಿಗಳ ನೇಮಕಾತಿಗೆ ಕಾನೂನು ತೊಡಕಿದೆ. ಅಡ್ವಕೇಟ್ ಜನರಲ್ ವಿದೇಶ ಪ್ರವಾಸದಲ್ಲಿದ್ದಾರೆ.
ಅವರು ಬಂದ ನಂತರ ಅಭ್ಯರ್ಥಿಗಳ ಪರ ವಾದಿಸಿದ ವಕೀಲರನ್ನು ಒಳಗೊಂಡು ಅ.25ರಂದು ಸಭೆ ನಡೆಸುವೆ. ಕಾನೂನಿನಲ್ಲಿ ಅವಕಾಶವಿದ್ದರೆ ಖಂಡಿತ ನೇಮಕ ಪ್ರಕ್ರಿಯೆ ಕೈಗೊಳ್ಳುವೆ.
ಇನ್ನು 40 ಸಾವಿರ ಶಿಕ್ಷಕರ ಕೊರತೆ ಇದೆ. ಮುಂದಿನ ವರ್ಷ ದೈಹಿಕ ಶಿಕ್ಷಕರನ್ನು ಒಳಗೊಂಡು 20 ಸಾವಿರ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದೆಂದು ಶನಿವಾರ ಕುಕನೂರು ತಾಲೂಕಿನ ಮಸಬ ಹಂಚಿನಾಳ ಗ್ರಾಮದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಯಾಕೆ 67 ಸ್ಥಾನಕ್ಕಿಳಿಯಿತು ಎಂಬ ಬಗ್ಗೆ ಬಿ.ವೈ.ವಿಜಯೇಂದ್ರ ಉತ್ತರಿಸಲಿ. ಕಾಂಗ್ರೆಸ್ ಬಗ್ಗೆ ಮಾತನಾಡಲು ಅವರೇನು ಕಾಂಗ್ರೆಸ್ಸಿಗರಾ ? ಸೋಲಿನ ಹತಾಶೆಯಿಂದ ಬಿಜೆಪಿಗರು ಬಸ್ ನಿಲ್ದಾಣದಲ್ಲಿ ಕುಳಿತು ಜೋತಿಷ್ಯಹೇಳುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಐದು ವರ್ಷ ಅಧಿಕಾರ ಪೂರೈಸುವುದರಲ್ಲಿ ಸಂದೇಹವಿಲ್ಲ. ಮಧು ಬಂಗಾರಪ್ಪ. ಶಿಕ್ಷಣ ಸಚಿವ.
ಮಧು ಬಂಗಾರಪ್ಪ. ಶಿಕ್ಷಣ ಸಚಿವ.