

ಮೈಸೂರು: ಜೀವನದಲ್ಲಿ ಶಿಕ್ಷಣ ಬಹಳ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಶ್ರಮವಹಿಸಿ ಸಾಧನೆ ಮಾಡಬೇಕು. ಆ ಮೂಲಕ ಶಂಕರಾಚಾರ್ಯರ ತತ್ವಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಸಲಹೆ ನೀಡಿದರು.
ಕರ್ನಾಟಕ ಸೇನಾ ಪಡೆಯಿಂದ ನಗರದ ಶೃಂಗೇರಿ ಶಂಕರಮಠದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀಶಂಕರ ಜಯಂತಿ ಹಾಗೂ ತತ್ವಜ್ಞಾನಿಗಳ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಶ್ರೀಶಂಕರಾಚಾರ್ಯ ಸೇವಾರತ್ನ ಪ್ರಶಸ್ತಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಅವರು ಮಾತನಾಡಿದರು.
ನಾನು ವಿದ್ಯಾರ್ಥಿಯಾಗಿದ್ದಾಗ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿರಲಿಲ್ಲ. ಇಂದು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಂಘಸಂಸ್ಥೆಗಳು ಪ್ರೋತ್ಸಾಹಿಸುತ್ತಿವೆ. ಜ್ಞಾನ ಯಾರ ಸ್ವತ್ತೂ ಅಲ್ಲ, ಪ್ರತಿಭೆ ಎಲ್ಲ್ಲ ಮಕ್ಕಳಲ್ಲಿಯೂ ಇರುತ್ತದೆ. ಇಂದು ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಓದಿದರೂ ಸಾಲದು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ದೇಶ, ಭಾಷೆ, ನೆಲ, ಜಲದ ಬಗ್ಗೆ ಶಂಕರಾಚಾರ್ಯ, ಗಾಂಧೀಜಿ, ಅಂಬೇಡ್ಕರ್, ಬಸವಣ್ಣ ನವರಂತಹ ಮಹನೀಯರ ಬಗ್ಗೆಯೂ ಓದಿ ತಿಳಿದುಕೊಳ್ಳಬೇಕು ಎಂದರು.
ಸಮಾಜಕ್ಕೆ ಆದರ್ಶವಾಗುವ ಪೀಳಿಗೆಯಾಗಬೇಕು. ತಂದೆ, ತಾಯಿಯನ್ನು ಗೌರವಿಸುವ, ಮನುಷ್ಯತ್ವಕ್ಕೆ ಬೆಲೆ ಕೊಡುವ ಮಕ್ಕಳು ನೀವಾಗಬೇಕು. ಈ ಭೂಮಿಯ ಮೇಲೆ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗುವಂತಹ ಸಾಧನೆ ಮಾಡಬೇಕು. ಇಂದು ಹೆಣ್ಣುಮಕ್ಕಳು ಎಲ್ಲ ರಂಗದಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಯಾರಿಗೂ ಕಡಿಮೆ ಇಲ್ಲದಿರುವುದರಿಂದ ಈ ಸಮಾಜಕ್ಕೆ ಶಕ್ತಿಯಾಗಬೇಕು ಎಂದು ತಿಳಿಸಿದರು.
ಶಂಕರಾಚಾರ್ಯ ತತ್ವ ಜ್ಞಾನಿ ಸೇವಾ ರತ್ನ ಪ್ರಶಸ್ತಿ ಪ್ರದಾನ:
ಇದೇ ಸಂದರ್ಭದಲ್ಲಿ ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷ ಎಸ್.ಜಯಪ್ರಕಾಶ್, ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ನರ ರೋಗ ತಜ್ಞ ಡಾ.ಶುಶೃತ್‌ಗೌಡ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆರ್.ಆದರ್ಶ, ದಿ. ಸಿಟಿ ಕೋಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಎನ್. ಸ್ವರೂಪ್, ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಕೆ.ವಿ. ಲಕ್ಷ್ಮೀದೇವಿ, ಮುಡಾ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಆರ್.ಸಿ. ಕೆಂಪರಾಜ್ ಅವರಿಗೆ ಶಂಕರಾಚಾರ್ಯ ತತ್ವ ಜ್ಞಾನಿ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೇ 2023-24ನೇ ಸಾಲಿನ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ 42 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮೈಸೂರು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಿ.ಟಿ. ಪ್ರಕಾಶ್, ದಿನೇಶ್ ಕೋಚಿಂಗ್‌ಸೆಂಟರ್ ಮುಖ್ಯಸ್ಥ ಎನ್.ವಿ. ದಿನೇಶ್ ಅವರು ಪುರಸ್ಕರಿಸಿದರು. ಮಹಾರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉದಯಶಂಕರ್, ಲೇಖಕಿ ಲೀಲಾಪ್ರಕಾಶ್ ಅವರು ಶ್ರೀ ಶಂಕರಾಚಾರ್ಯರ ಕುರಿತು ಭಾಷಣ ಮಾಡಿದರು.
ವಿಜಯವಿಠ್ಠಲ ಕಾಲೇಜು ಪ್ರಾಂಶುಪಾಲ ಸತ್ಯಪ್ರಸಾದ್, ಡಿಸಿಪಿಐ ಎಚ್. ಕೆ ಪಾಂಡು, ಲಯನ್ಸ್‌ಸಂಸ್ಥೆಯ ಸುರೇಶ್ ಗೋಲ್ಡ್, ಕರ್ನಾಟಕ ಸೇನಾ ಪಡೆಯ ಎಂ.ಬಿ. ಪ್ರಭುಶಂಕರ್, ಕೃಷ್ಣಯ್ಯ, ಪಿ.ಪ್ರಜೀಶ್, ಶಾಂತರಾಜೇಅರಸ್, ಅಂಬಾ ಅರಸ್,ಹನುಮಂತಯ್ಯ, ಚಾ.ರಂ. ಶ್ರೀನಿವಾಸಗೌಡ, ಕುಮಾರ್‌ಗೌಡ, ನೇಹಾ, ವಿಜಯೇಂದ್ರ, ಗಣೇಶಪ್ರಸಾದ್, ರಮೇಶ್, ಪ್ರಭಾಕರ್, ನರಸಿಂಹೇಗೌಡ, ಸಿಂಧುವಳ್ಳಿ ಶಿವಕುಮಾರ್, ರವೀಶ್, ಹನುಮಂತೇಗೌಡ, ವಿಷ್ಣು ಇತರರು ಇದ್ದರು.