ದೇಶದ ಭವಿಷ್ಯ ಬದಲಾಯಿಸುವ ಅಸ್ತ್ರ ಶಿಕ್ಷಣ

SRT
ಶಿರಹಟ್ಟಿ ಪಟ್ಟಣದ ಜ. ಫಕೀರೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭಕ್ಕೆ ಜ.ಫಕೀರಸಿದ್ಧರಾಮ ಶ್ರೀಗಳು ಜ್ಯೋತಿ ಬೆಳೆಗಿಸಿ ಚಾಲನೆ ನೀಡಿದರು.
Published on

ಶಿರಹಟ್ಟಿ: ಬದುಕಿಗೆ ಗುರಿ ತೋರಿದ ಗುರು ಸ್ಥಾನದ ಮಹಿಮೆ ಅಪಾರ. ಮಕ್ಕಳ ಮನದಲ್ಲಿ ಕಲಿಕೆಯ ಬೀಜ ಬಿತ್ತಿ, ವಿದ್ಯೆಯ ಜತೆಗೆ ಒಳ್ಳೆಯ ಸಂಸ್ಕಾರ ನೀಡಿ ಅವರ ಬದುಕಿನಲ್ಲಿ ಸುಜ್ಞಾನದ ಬೆಳಕು ಮೂಡಿಸುವವ ಶಿಕ್ಷಕ. ಶಿಕ್ಷಣ ಭವಿಷ್ಯ ಬದಲಾಯಿಸುವ ಅಸ್ತ್ರ ಎಂದು ಶ್ರೀ ಜ. ಫಕೀರಸಿದ್ಧರಾಮ ಸ್ವಾಮೀಜಿ ಹೇಳಿದರು.
ತಾಲೂಕಾಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಹಾಗೂ ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕುಗಳ ವಿವಿಧ ಶಿಕ್ಷಕರ ಸಂಘಟನೆಗಳ ಸಹಯೋಗದಲ್ಲಿ ಪಟ್ಟಣದ ಜ. ಫಕೀರೇಶ್ವರ ಮಠದ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕ ತಾನು ಜ್ಞಾನ ಸಂಪಾದಿಸಿದ್ದನ್ನು ಮಕ್ಕಳಿಗೆ ಧಾರೆ ಎರೆದಾಗ ಶಿಕ್ಷಕ ವೃತ್ತಿಗೆ ಬೆಲೆ ಬರುತ್ತದೆ. ಆತ ಸುಭದ್ರ ದೇಶ ನಿರ್ಮಾಣದತ್ತ ಚಿಂತನೆ ತೋರಬೇಕು. ಶಿಕ್ಷಕ ಸ್ಥಾನಕ್ಕೆ ಕಳಂಕ ತರಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ. ಶಿಕ್ಷಕರು ವೃತ್ತಿಯ ಪಾವಿತ್ರೃ ಕಾಪಾಡಿಕೊಂಡು ಮಕ್ಕಳೊಂದಿಗೆ ಬೆರೆತು ಪರಿಣಾಮಕಾರಿ ಬೋಧನೆ ಮಾಡಿದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ತಾಲೂಕಿನ ಬಹುತೇಕ ಶಾಲೆಗಳಲ್ಲಿ ಕೊರತೆಯಿರುವ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಫಕೀರೇಶ್ವರ ಮಠದ ಉತ್ತರಾಧಿಕಾರಿ ಶ್ರೀ ಫಕೀರದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಶಿಕ್ಷಕ ವೃತ್ತಿ ಹೊಟ್ಟೆಪಾಡಿಗೆ ಸೀಮಿತವಲ್ಲ. ಗುರುವಾದವರಿಗೆ ಜ್ಞಾನ ಸಂಪಾದನೆ ದಾಹ ಇರಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net