

ದೇವದುರ್ಗ: ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಮಹಾ ಶಿವಭಕ್ತೆಯಾಗಿದ್ದು, ಭಕ್ತಿಯಿಂದಲೇ ಸಮಾಜವನ್ನು ಗೆದ್ದಿದ್ದಾರೆ. ಅವರ ಆದರ್ಶ ಜೀವನ ಎಲ್ಲರಿಗೂ ಮಾದರಿ ಎಂದು ರಡ್ಡಿ ಸಮಾಜದ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲ್ ಜಾಗಟಗಲ್ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀಶೈಲ ಮಲ್ಲಿಕಾರ್ಜುನನನ್ನು ಸದಾ ಸ್ಮರಿಸುತ್ತ ಕಾಯಕ, ಭಕ್ತಿ ಮಾರ್ಗವನ್ನು ಅನುಸರಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಅವರ ಬದುಕು ಎಲ್ಲರಿಗೂ ಆದರ್ಶ. ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಶಿಕ್ಷಣವೇ ನಮ್ಮ ಬದುಕು ಬದಲಾಯಿಸುವ ಅಸ್ತ್ರವಾಗಿದೆ ಎಂದರು.
ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಬನದೇಶ್ವರ, ಗ್ರೇಡ್-2 ತಹಸೀಲ್ದಾರ್ ಭೀಮರಾಯ ಮೇಟಿ, ಪ್ರಾಧ್ಯಾಪಕ ಡಾ.ಸುಭಾಶ್ಚಂದ್ರ ಪಾಟೀಲ್, ಕಂದಾಯ ನಿರೀಕ್ಷಕ ಭೀಮನಗೌಡ ಮೇಟಿ, ಎಫ್‌ಡಿಎ ಶರಣಬಸವ, ಪ್ರಮುಖರಾದ ಶಿಖರೇಶ ಪಾಟೀಲ್, ವೆಂಕಟರಾಯ ಬೆನಕನ್, ಚಂದ್ರಶೇಖರ ಪಾಟೀಲ್, ಬಾಪುಗೌಡ, ಮಲ್ಲಿಕಾರ್ಜುನ ವಕೀಲ, ಗಂಗನಗೌಡ ಗೌರಂಪೇಟೆ, ಎಂ.ಬಿ.ಪಾಟೀಲ್, ಸುನೀಲ್ ಮಸರಕಲ್ ಇತರರಿದ್ದರು.