ಸರ್ವ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ; ಸಿ.ಕೆ. ತೊರವಿ

DSS MEETING
ವಿಜಯಪುರದ ಹಳೆಯ ಪ್ರವಾಸಿ ಮಂದಿರದಲ್ಲಿ ದಲಿತ ಸಮರ ಸೇನೆಯ ಸಭೆ ನಡೆಯಿತು. ಸಿ.ಕೆ. ತೊರವಿ, ಅನಿಲ್ ಹೊಸಮನಿ, ಗೌಡಪ್ಪ ಬಸಪ್ಪ ಮತ್ತಿತರರಿದ್ದಾರೆ.
Published on

ವಿಜಯಪುರ: ದೇಶದ ಮೊದಲ ಚಳುವಳಿಗಾರ ಎಂದರೆ ಮಹಾತ್ಮ ಜ್ಯೋತಿಬಾ ಫುಲೆ. ಅಸ್ಪಶ್ಯತೆಯ ಅಪಮಾನಕ್ಕೆ ತುತ್ತಾಗಿದ್ದ ಜ್ಯೋತಿಬಾ ಫುಲೆ ಅವರು ಸರ್ವ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರ ಎಂದರಿತು ಶೈಕ್ಷಣಿಕ ಕ್ರಾಂತಿಗೆ ಮುಂದಾಗಿದ್ದರು. ಅವರ ಹೋರಾಟದ ಫಲವಾಗಿ ಇಂದು ಎಲ್ಲ ಕೆಳಸ್ತರದವರು ಶಿಕ್ಷಣ ಪಡೆಯುವಂತಾಯಿತು ಎಂದು ಬಿಎಸ್‌ಪಿ ರಾಜ್ಯ ವಕ್ತಾರ ಸಿ.ಕೆ. ತೊರವಿ ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಇರುವ ಹಳೆಯ ಪ್ರವಾಸಿ ಮಂದಿರದಲ್ಲಿ ದಲಿತ ಸಮರ ಸೇನೆಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

1974ರಲ್ಲಿ ಪ್ರೊಫೆಸರ್ ಬಿ. ಕೃಷ್ಣಪ್ಪ, ದೇವನೂರು ಮಹಾದೇವ, ಡಾ. ಸಿದ್ದಲಿಂಗಯ್ಯ, ಮಂಗಳೂರು ವಿಜಯ ಇನ್ನೂ ಮುಂತಾದವರಿಂದ ಸಂಘಟನೆಗೊಂಡ ಡಿಎಸ್‌ಎಸ್ ಅನೇಕ ಜನಪರ ಕಾರ್ಯಕ್ರಮ ರೂಪಿಸಿತು. ಹಕ್ಕು ವಂಚಿತರಿಗೆ, ನ್ಯಾಯ ವಂಚಿತರಿಗೆ, ಅಸಹಾಯಕರಿಗೆ, ಭೂ ರಹಿತರಿಗೆ ರಕ್ಷಾ ಕವಚವಾಗಿ ಕೆಲಸ ಮಾಡಿದ್ದು ಮಾನನೀಯ ಎಂದು ಹೇಳಿದರು.

ಶಿವಸೇನೆ ಮತ್ತು ಡಿಎಸ್‌ಎಸ್ 1974ರಲ್ಲಿ ಮಹಾರಾಷ್ಟ್ರದಲ್ಲಿ ಒಟ್ಟಿಗೆ ಆರಂಭಗೊಂಡರೂ ಶಿವಸೇನೆ ಮಾತ್ರ ರಾಜಕಾರಣದ ಭಾಗವಾಯಿತು. ಡಿಎಸ್‌ಎಸ್ ಕರ್ನಾಟಕದಲ್ಲಿ ರಾಜಕಾರಣ ಪ್ರವೇಶಿಸಲಿಲ್ಲ. ಬಿಎಸ್‌ಪಿಯಿಂದ ಕಾನ್ಶೀರಾಮ್ ಸಾಹೇಬರು ದೇಶದಲ್ಲಿ ನಾಯಕರನ್ನು ಹುಟ್ಟು ಹಾಕಿದರು ಎಂದರು.

ಪತ್ರಕರ್ತ ಅನಿಲ್ ಹೊಸಮನಿ ಮಾತನಾಡಿ, ಬೂಸಾ ಚಳುವಳಿ ಡಿಎಸ್‌ಎಸ್ ಹುಟ್ಟಿಗೆ ಕಾರಣ, ಅಂದಿನ ಪೌರಾಡಳಿತ ಸಚಿವರಾಗಿದ್ದ ಬಿ.ಬಸಲಿಂಗಪ್ಪನವರು ಕನ್ನಡ ಸಾಹಿತ್ಯ ಬೂಸಾ ಎಂದು ಹೇಳಿದ್ದಕ್ಕೆ ಅಂದಿನ ಸಮಾನತೆ ವಿರೋಧಿಗಳು ಅವರ ಹೇಳಿಕೆಯನ್ನು ಖಂಡಿಸಿ ಅಶಾಂತಿ ಸೃಷ್ಟಿಸಿದರು. ಅದರ ಪ್ರತಿರೋಧವೆ ಡಿಎಸ್‌ಎಸ್ ಹಳ್ಳಿಹಳ್ಳಿಗೂ ಕ್ರಾಂತಿಕಾರಿ ಕೆಲಸಗಳನ್ನು ಸೃಷ್ಟಿಸಿದ್ದು ಇತಿಹಾಸವೆಂದರು. ಅಂದಿನ ಹಿರಿಯ ತಲೆಮಾರಿನ ಡಿಎಸ್‌ಎಸ್ ಕಾರ್ಯಕರ್ತರು ಸೈನಿಕರಂತೆ ಭೂಮಿ ಮತ್ತು ಸ್ವಾಭಿಮಾನಕ್ಕಾಗಿ ಕಂಕಣಭದ್ಧರಾಗಿದ್ದರು ಎಂದು ಸ್ಮರಿಸಿದರು.

ಸಮಿತಿಯ ಜಿಲ್ಲಾಧ್ಯಕ್ಷ ಗೌಡಪ್ಪ ಬಸಪ್ಪ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಿದರು. ಪದಾಧಿಕಾರಿಗಳು ಹಾಗೂ ಮುಖಂಡರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net