

ಮಡಿಕೇರಿ: ಕನ್ನಡಿಯನ್ನು ಕಿಟಕಿಯನ್ನಾಗಿಸುವಂತ ಪ್ರಕ್ರಿಯೆ ಶಿಕ್ಷಣ. ನಮ್ಮೊಳಗಿರುವ ಪ್ರತಿಭೆಯನ್ನು ಗುರುತಿಸಲು ಶಿಕ್ಷಣ ಅತ್ಯಮೂಲ್ಯ ಕಾರ್ಯವೆಂದು ಕೊಡಗು ಜಿಲ್ಲಾ ಪ್ರಾಂಶುಪಾಲ ಸಂಘದ ಖಜಾಂಚಿ ಅಂತೋಣಿ ವಿಜಯನ್ ಅಲ್ವಾರೀಸ್ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮತ್ತು ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರುಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು ೨೦೨೫-೨೬ನೇ ಸಾಲಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆ ಹಮ್ಮಿಕೊಳ್ಳುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಪ್ರಾಂಶುಪಾಲ ಸಂಘ ಬಹಳ ಸಹಕಾರಿಯಾಗಿರುವುದು ಸ್ಮರಣೀಯ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸನ್ಮಾನಿಸುವುದು ಅತ್ಯಂತ ಗೌರವಯುತ ಕಾರ್ಯ. ಹಾಗೆಯೇ ಪಾಲಕರು ಅದಕ್ಕಾಗಿ ಶ್ರಮಿಸುತ್ತಿರುವುದು ಕೂಡ ಗಮನಾರ್ಹವೆಂದು ತಿಳಿಸಿದರು.
ಇಲಾಖೆ ವತಿಯಿಂದ ಯುವ ಸಂಸತ್ತು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಇದರಲ್ಲಿ ರಾಜಕೀಯ ಪ್ರವೃತ್ತಿ ಮೇಲ್ಮನೆ ಕೆಳಮನೆ ಕಾರ್ಯ ಹೇಗೆ ನಿರ್ವಹಿಸುತ್ತದೆ ಎಂದು ತಿಳಿಸಿಕೊಡಲಾಗುತ್ತದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಎಲ್.ಚಿದಾನಂದ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಪ್ರಾಧ್ಯಾಪಕರುಗಳಲ್ಲದೆ ಪಾಲಕರ ಪ್ರಯತ್ನವು ಮುಖ್ಯ ಪಾತ್ರ ವಹಿಸಿದೆ. ಕೊಡಗಿನಲ್ಲಿ ಮಳೆಯಿಂದಾಗಿ ರಜೆ ಇದ್ದರೂ ಫಲಿತಾಂಶದಲ್ಲಿ ವ್ಯತ್ಯಾಸವಾಗಲಿಲ್ಲ ಎಂದು ತಿಳಿಸಿದ ಅವರು, ಈ ಬಾರಿ ಕೊಡಗು ನಾಲ್ಕನೇ ಸ್ಥಾನ ಪಡೆದಿದ್ದರೂ ಮುಂದಿನ ದಿನಗಳಲ್ಲಿ ಮೊದಲನೇ ಸ್ಥಾನ ಪಡೆಯುವಂತಾಗಬೇಕು ಎಂದು ಕೋರಿದರು.
ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ೩೩ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ದಾಯನ ಎಸ್.ರಾಮಕೃಷ್ಣ ಅವರನ್ನು ಸನ್ಮಾನಿಸಿ ಗೌರವಿಸಿದರು. ೨೦೨೪-೨೫ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕಲಾವಿಭಾಗದಿಂದ ಅಫಿಯ ಶರೀಫ್, ಎಂ.ಆರ್.ನವನಿದನ್, ಎಸ್.ಸಾಜಿದ, ಕೆ.ಮೇಘಶ್ರೀ, ವಾಣಿಜ್ಯ ವಿಭಾಗದಿಂದ ಡಿಂಪಲ್ ತಮ್ಮಯ್ಯ, ಕೆ.ಎಸ್.ಶಿವಾನಿ, ವಿ.ಎಸ್.ನಿಕ್ಷಾ, ಡಿ.ಡಿ.ಸೃಜನ, ವಿಜ್ಞಾನ ವಿಭಾಗದಿಂದ ಟಿ.ವಿ.ವೈಷ್ಣವಿ, ಎ.ಆರ್.ಪನ್ಯಪನ್ನಮ್ಮ, ಪಿ.ಚಿತ್ರ, ಲಿಜಾ ಜೇಮ್ಸ್, ಎಂ.ಪಿ.ಮಮತಾ, ಪಿ.ಸಾನಿಕ ಜಾಸ್ಮಿನ್, ದೀಕ್ಷಾ ದೇಚಮ್ಮ ಇವರುಗಳಿಗೆ ನಗದು ಬಹುಮಾನವನ್ನು ವಿತರಿಸಲಾಯಿತು.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ವೈಷ್ಣವಿ ಹಾಗೂ ಚಿತ್ರ ತನ್ನ ಅಭಿಪ್ರಾಯವನ್ನು ತಿಳಿಸಿ ಕಂಬನಿ ಮಿಡಿದರು. ಶೇ.೧೦೦ ಫಲಿತಾಂಶವನ್ನು ಪಡೆದಿರುವ ಕೊಡಗು ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳಾದ ಪದವಿ ಪೂರ್ವ ಕಾಲೇಜು ಗೋಣಿಕೊಪ್ಪಲು, ಸಂತ ಅಂತೋಣಿ ಪದವಿ ಪೂರ್ವ ಕಾಲೇಜು ಪೊನ್ನಂಪೇಟೆ, ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪದವಿ ಪೂರ್ವ ಕಾಲೇಜು ಹಳ್ಳಿಗಟ್ಟು, ಐಶ್ವರ್ಯ ಸಂಯುಕ್ತ ಪದವಿ ಪೂರ್ವ ಕಾಲೇಜು, ಕುಶಾಲನಗರ, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಕೊಡ್ಲಿಪೇಟೆ, ಲಯನ್ಸ್ ಪದವಿ ಪೂರ್ವ ಕಾಲೇಜು ಗೋಣಿಕೊಪ್ಪಲು, ಅಟಲ್ ಬಿಹಾರಿ ವಾಜಪೇಯಿ ವಸತಿ ಪದವಿ ಪೂರ್ವ ಕಾಲೇಜು ಭಾಗಮಂಡಲ ಕಾಲೇಜುಗಳ ಪ್ರಾಂಶುಪಾಲರಿಗೆ ಸ್ಮರಣಿಕೆ ವಿತರಿಸಲಾಯಿತು.
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪಿ.ಆರ್.ವಿಜಯನ್, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲ ಸಂಘದ ಖಜಾಂಚಿ ಅಂತೋನಿ ವಿಜಯನ್ ಅಲ್ವಾರೀಸ್, ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಎನ್.ಕೆ.ಜ್ಯೋತಿ, ಪ್ರಾಂಶುಪಾಲ ಸಂಘದ ಅಧ್ಯಕ್ಷರಾದ ಪಿ.ಎಂ.ದೇವಕಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಚಿದಾನಂದ ಕುಮಾರ್ ಎಂಎಲ್ ಮತ್ತಿತರರು ಇದ್ದರು.