

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತ ವಿಶ್ವ ಗುರುವಾಗಲು ಶಿಕ್ಷಣವೇ ಮಾಧ್ಯಮವಾಗಿದ್ದು, ವಿದ್ಯಾಭಾರತಿ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಭಾರತೀಯ ಸಂಸ್ಕೃತಿ, ಪರಂಪರೆ ಮಹತ್ವವನ್ನು ಶಿಕ್ಷಣ ಕ್ಷೇತ್ರದ ಮೂಲಕ ಪ್ರಚುರಪಡಿಸುವಲ್ಲಿ ಹಲವು ವರ್ಷಗಳಿಂದ ಅವಿರತವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಭಾರತೀಯ ಶಿಕ್ಷಣ ಪ್ರಸಾರ ಸಮಿತಿ ಆಡಳಿತ ಮಂಡಳಿ ಸದಸ್ಯ ಶ್ರೀಧರ ನಾಡಗೀರ ಹೇಳಿದರು.
ನಗರದ ಭಾರತೀಯ ಶಿಕ್ಷಣ ಪ್ರಸಾರ ಸಮಿತಿ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿದ್ಯಾಭಾರತಿ ಕರ್ನಾಟಕ ಸಂಸ್ಕೃತಿ ಜ್ಞಾನ ಪರಿಚಯ ಯೋಜನೆ ನವೀಕೃತ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾಭಾರತಿ ಕರ್ನಾಟಕ ಪ್ರಾಂತ ಅಧ್ಯಕ್ಷ ಪರಮೇಶ್ವರ ಹೆಗಡೆ ಮಾತನಾಡಿ, ಸಂಸ್ಕೃತಿ, ಜ್ಞಾನ ಪರಿಚಯವು ವಿದ್ಯಾಭಾರತಿ ಯೋಜನೆಯಲ್ಲಿ ಒಂದು. ಸಂಸ್ಕೃತಿ, ಜ್ಞಾನ ಪರಿಚಯ ಪರೀಕ್ಷೆಗಳನ್ನು ಶಾಲಾ ಹಂತದಲ್ಲಿ ನಡೆಸುತ್ತಿದ್ದು, ಭಾರತೀಯ ಸಂಸ್ಕೃತಿ ಪರಿಚಯಿಸುವ, ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಜಾಗೃತಿ ಮೂಡಿಸುವ ಕಾರ್ಯವಾಗಿದೆ. ಸಂಸ್ಕೃತಿ ಜ್ಞಾನ ಪರಿಚಯದ ಪುಸ್ತಕಗಳು ಯುಪಿಎಸ್‌ಸಿ, ಇತರ ಸ್ಪರ್ಧಾತ್ಮಕ ಪರೀಕ್ಷೆ ಬಯಸುವ ವಿದ್ಯಾರ್ಥಿಗಳಿಗೂ ಉಪಯುಕ್ತವಾಗಿದೆ ಎಂದರು.
ಜಿ.ಆರ್.ಜಗದೀಶ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತೀಯ ಶಿಕ್ಷಣ ಪದ್ಧತಿ ಮಹತ್ವದ ಅರಿವು ಮೂಡಿಸುವುದೇ ವಿದ್ಯಾ ಭಾರತಿ ಉದ್ದೇಶ. ಭವ್ಯ ಭಾರತದ ಪ್ರಾಚೀನ ಪರಂಪರೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದರ ಜತೆಗೆ ಭಾರತದ ಮಹಾಪುರುಷರ ಪುಸ್ತಕ ಪ್ರಕಟಿಸಿ ಭಾರತೀಯ ಸಂಸ್ಕೃತಿ ಪರಿಚಯಿಸುವ ಮೂಲಕ ವಿದ್ಯಾರ್ಥಿಗಳಿಗೆ, ವಿದ್ಯಾ ಸಂಸ್ಥೆಗಳು ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಪ್ರೇರಣೆ ನೀಡುವಲ್ಲಿ ವಿದ್ಯಾಭಾರತಿ ಹಲವು ವರ್ಷಗಳಿಂದ ಕಾರ್ಯ ಪ್ರವೃತ್ತವಾಗಿದೆ ಎಂದರು.
ವಿದ್ಯಾಭಾರತಿ ಪ್ರಾಂತ ಖಜಾಂಚಿ ಬಿ.ಕೆ. ರಾಮಕೃಷ್ಣ, ದಕ್ಷಿಣಮಧ್ಯ ಕ್ಷೇತ್ರೀಯ ಉಪಾಧ್ಯಕ್ಷ ಎಸ್.ವಿ. ಹೊನ್ನುಂಗುರ, ಎನ್.ಜಿ. ಗಲಗಲಿ, ಅಶೋಕ ನಾಯಕ, ಇತರರು ಇದ್ದರು.
ಸಂಜೀವ ದಿಕ್ಷಿತ್ ಸ್ವಾಗತಿಸಿದರು. ಸುಹಾಸ ಆನೆಗುಂದಿ ನಿರೂಪಿಸಿದರು. ನಾಗೇಂದ್ರ ದೊಡಮನಿ ವಂದಿಸಿದರು.