

ಗೋಕರ್ಣ: ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ದೇಶಭಂಡಾರಿ ಸಮಾಜದ ಮೇಲೆ ಶ್ರೀರಾಮಚಂದ್ರಾಪುರ ಮಠದ ಅನುಗ್ರಹ ಸದಾ ಇರುತ್ತದೆ ಎಂದು ಇಲ್ಲಿನ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಸಂಘಟನಾ ಚಾತುರ್ಮಾಸ್ಯ ವ್ರತನಿಷ್ಠ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಬುಧವಾರ ದೇಶಭಂಡಾರಿ ಸಮಾಜದ ವತಿಯಿಂದ ನೀಡಲಾದ ಪಾದಪೂಜೆಯನ್ನು ಸ್ವೀಕರಿಸಿ ಆಶೀರ್ವದಿಸಿದರು.
ಯಾವುದೇ ಸಮಾಜದ ಸವಾರ್ಂಗೀಣ ಉನ್ನತಿಗೆ ಶಿಕ್ಷಣ ಪ್ರಧಾನ ಸಾಧನವಾಗಿದೆ. ದೇಶಭಂಡಾರಿ ಸಮಾಜ ಶೈಕ್ಷಣಿಕವಾಗಿ ಮುಂದೆ ಬರುವಂತಾಗಬೇಕು. ಈ ಸಮಾಜದ ಪ್ರಮುಖರು ಪ್ರತಿಯೊಬ್ಬರನ್ನೂ ಸುಶಿಕ್ಷಿತರಾಗಿ ಮಾಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವಂತಾಗಬೇಕು ಎಂದು ಶ್ರೀಗಳು ಆಶೀರ್ವಚನವಿತ್ತರು.
ಉತ್ತರ ಕನ್ನಡ ಜಿಲ್ಲಾ ದೇಶಭಂಡಾರಿ ಸಮಾಜೋನ್ನತಿ ಸಂಘದ ಉಪಾಧ್ಯಕ್ಷ ಚಿದಾನಂದ ಹರಿ ಭಂಡಾರಿ ದಂಪತಿ ಪಾದಪೂಜೆ ನೆರವೇರಿಸಿದರು. ಈ ವೇಳೆ ಸಮಾಜದ ಪ್ರಮುಖರು ಮನವಿ ಮಾಡಿಕೊಂಡು ಮುಂದಿನ ದಿನಗಳಲ್ಲಿ ಶ್ರೀಗಳ ಉಪಸ್ಥಿತಿಯಲ್ಲಿ ಸಮಾಜ ಬಾಂಧವರ ಬೃಹತ್ ಸಮ್ಮೇಳನ ನಡೆಸಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದ ಗಮನ ಸೆಳೆಯಲು ನಿರ್ಧರಿಸಲಾಗಿದೆ. ಇದಕ್ಕೆ ಶ್ರೀಗಳು ಯುಕ್ತ ಮಾರ್ಗದರ್ಶನ ಅನುಗ್ರಹಿಸಬೇಕು ಎಂದು ವಿನಂತಿಸಿದರು.
ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ದೇಶಭಂಡಾರಿ ಸಮಾಜದ ಸಾಧಕರಾದ ಸಮಾಜದ ಜಿಲ್ಲಾಧ್ಯಕ್ಷ ಕೇಶವ ದತ್ತ ಪೆಡ್ನೆಕರ,ದೀಪಕ ದತ್ತ ವೈಂಗಣಕರ ನಂದನಗದ್ದೆ ಕಾರವಾರ, ಸಮಾಜದ ಕುಮಟಾ ಅಧ್ಯಕ್ಷ ಶ್ರೀಧರ ರಾಮ ಬೀರಕೋಡಿ, ಕೆಕ್ಕಾರು ಹಾರಗೋಳಿ ಮಂದಿರ ಸದಸ್ಯ ಹೆಬ್ಬನಕೇರಿ ಮಂಜುನಾಥ ಗೋವಿಂದ ದೇಶಭಂಡಾರಿ ಮತ್ತು ಹಾರಗೋಳಿ ಮಂದಿರ ಉಪಾಧ್ಯಕ್ಷ ಪಾಂಡುರಂಗ ಬಾಬು ದೇಶಭಂಡಾರಿ ಅವರನ್ನು ಶ್ರೀಗಳು ಸನ್ಮಾನಿಸಿದರು.