

ರಬಕವಿ-ಬನಹಟ್ಟಿ: ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂದು ರಬಕವಿ ಬನಹಟ್ಟಿ ಸಮಗಾರ ಹರಳಯ್ಯ ತಾಲೂಕು ಘಟಕದ ಗೌರವಾಧ್ಯಕ್ಷ ಗಿರೆಪ್ಪ ಕಬಾಡೆ ಹೇಳಿದರು.
ರಬಕವಿ ಬನಹಟ್ಟಿ ತಾಲೂಕು ಸಮಗಾರ ಹರಳಯ್ಯ ಸಮಾಜದ ಬಾಂಧವರು ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಕ ಶ್ರೀಶೈಲ ಬುರ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಪ್ರತಿಭಾವಂತ ಮಕ್ಕಳಿದ್ದು, ಅವರಿಗೆ ಸೂಕ್ತ ಪ್ರೋತ್ಸಾಹ ದೊರೆತರೆ ದೇಶಕ್ಕೆ ಬಹುದೊಡ್ಡ ಕೊಡಗು ಕೊಡುವ ಮಹಾನ್ ವ್ಯಕ್ತಿಗಳಾಗಿ ಬೆಳೆಯಬಲ್ಲರು ಎಂಬುದಕ್ಕೆ ಇಲ್ಲಿಯ ವಿದ್ಯಾರ್ಥಿಗಳೇ ಸಾಕ್ಷಿ ಎಂದರು.
ಸಮಾಜದ ಅಧ್ಯಕ್ಷ ಸಚಿನ ಕೊಡತೆ ಮಾತನಾಡಿ, ಸಮಾಜದ ಅನೇಕ ಸಾಧಕ ಮಕ್ಕಳಿಗೆ ಸನ್ಮಾನಿಸಿ ಪ್ರೋತ್ಸಾಹಿಸುವುದು ಮುಂದಿನ ಪೀಳಿಗೆಗೆ ಮಾದರಿಯಾಗುತ್ತದೆ ಎಂದರು.
ಸಮಾಜದ ಉಪಾಧ್ಯಕ್ಷ ನಾಗೇಶ ಚಾಂಬಾರ, ಪ್ರಧಾನ ಕಾರ್ಯದರ್ಶಿ ಸುಧಾಕರ ಸಣ್ಣಕ್ಕಿ, ಕಾರ್ಯದರ್ಶಿ ಮಹಾದೇವ ಹಂಜಗಿ, ಸದಸ್ಯರಾದ ಸಂಜಯ ಕೊಡತೆ, ಬಸು ಮಡ್ಡೆನ್ನವರ, ಶಿವಾನಂದ ಹೊನಕಡಬಿ, ಆನಂದ ಪಾಂಡಪ್ಪಗೋಳ, ನಿವೃತ್ತ ಮುಖ್ಯಶಿಕ್ಷಕ ದುಂಡಪ್ಪ ದಾನವಾಡಕರ ಮತ್ತು ಸಾವಿತ್ರಿ ಸಪ್ತಾಳಕರ ಇದ್ದರು.