ಸರ್ವ ಸಮಸ್ಯೆಗಳಿಗೂ ಶಿಕ್ಷಣವೇ ಸಿದ್ಧೌಷಧ

mysore
Published on

ಮೈಸೂರು: ಶಿಕ್ಷಣವೊಂದಿದ್ದರೆ ಜೀವನದಲ್ಲಿ ಎಂತಹ ಸಮಸ್ಯೆಯನ್ನಾದರೂ ಎದುರಿಸಿ ಏನು ಬೇಕಾದರೂ ಸಾಧಿಸಬಹುದು. ಹೀಗಾಗಿ, ಸರ್ವ ಸಮಸ್ಯೆಗಳಿಗೂ ಶಿಕ್ಷಣವೇ ಸಿದ್ಧೌಷಧವಾಗಿದೆ ಎಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.


ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಹಯೋಗದಲ್ಲಿ ಶಕ್ತಿನಗರದ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.


ಏನೇ ಕಷ್ಟವಿದ್ದರೂ ಎಂತಹ ತೊಂದರೆ ಬಂದರೂ ಶಿಕ್ಷಣದಿಂದ ಯಾರೂ ದೂರ ಉಳಿಯಬಾರದು. ಮುಂದಿನ ವಿದ್ಯಾಭ್ಯಾಸದ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಬೇಕೆಂಬುದು ನಿಜ. ಆದರೆ, ಅಂಕಗಳೇ ಜೀವನವಲ್ಲ. ಹೀಗಾಗಿ ಅಂಕದೊಂದಿಗೆ ಮಾನವೀಯ ಗುಣ, ಜೀವನ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದರು.


ಸ್ಪರ್ಧಾ ಜಗತ್ತಿನಲ್ಲಿ ಅಂಕಗಳ ವೇಗದ ಸ್ಪರ್ಧೆಯಲ್ಲಿ ನಮ್ಮ ನೆಲದ ಮೌಲ್ಯಾಧಾರಿತ ಸಂಸ್ಕೃತಿಯನ್ನು ಎಂದಿಗೂ ಕಡೆಗಣಿಸಬಾರದು. ವಿದ್ಯಾರ್ಥಿಗಳ ಸುಂದರ ಭವಿಷ್ಯ ಇರುವುದೇ ಮಾನವೀಯ ಸಂಸ್ಕೃತಿಯುಳ್ಳ ಸನ್ನಡತೆಯಲ್ಲಿ ಎಂದರು.


ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಗಿರಿಯಾಭೋವಿ ಪಾಳ್ಯದ ಸರ್ಕಾರಿ ಶಾಲೆಯ ಪಲ್ಲವಿ, ಗೌಸಿಯಾನಗರದ ಸರ್ಕಾರಿ ಶಾಲೆಯ ಸಬಿಯಾ ಅಂಜುಂ, ಶಕ್ತಿನಗರದ ಜೆಎಸ್‌ಎಸ್ ಶಾಲೆಯ ಮೆಹರ್‌ಬಾನು ಮತ್ತು ಅಜುಂ ಮಹಮದಿ, ಗಿರಿಯಾ ಭೋವಿಪಾಳ್ಯದ ಜೆಎಸ್‌ಎಸ್ ಶಾಲೆಯ ದುರ್ಗಾಬಾಯಿ, ಸಂತ ಶಿಶುನಾಳ ಶರೀಫ್ ಶಾಲೆಯ ಎಸ್.ಮಧು, ಸಿದ್ಧಾರ್ಥನಗರ ಜೆಎಸ್‌ಎಸ್ ಶಾಲೆಯ ಆರ್.ರಂಜಿತಾ, ರಾಘವೇಂದ್ರನಗರದ ಸರ್ಕಾರಿ ಶಾಲೆಯ ಆರ್.ಐಶ್ವರ್ಯಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.


ಲೇಖಕಿ ಡಾ.ಜಮುನಾ ರಾಣಿ ಮಿರ್ಲೆ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ವೈದ್ಯ ಡಾ.ಜೆ.ಪ್ರಸನ್ನಕುಮಾರ್, ಶಿಕ್ಷಕರಾದ ಜಿ.ಬಿ.ಮಹೇಶ್, ಜ್ಯೋತಿ, ಬಿ.ರೇಣುಕ ಪ್ರಸಾದ್, ಡಿ.ನಾಗರಾಜಪ್ಪ, ಎಂ.ಮಂಜುಳಾ, ಎನ್.ರೂಪಶ್ರೀ, ಸಿ. ರಶ್ಮಿ, ಆರ್.ಮಹಾಲಕ್ಷ್ಮೀ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net