ಶಿಕ್ಷಣ ವಿದ್ಯಾರ್ಥಿಯ ಮೂಲಭೂತ ಅಗತ್ಯತೆ

mng_8 nov govinda dasa
ಗೋವಿಂದ ದಾಸ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಭಕ್ತ ಶ್ರೀ ಕುತ್ತೆತ್ತೂರು ಗೋವಿಂದ ದಾಸ ಚಾರಿಟೇಬಲ್ ಟ್ರಸ್ಟ್ ಫೌಂಡೇಶನ್‌ನ ವತಿಯಿಂದ ನೀಡುತ್ತಿರುವ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಗೋವಿಂದ ದಾಸ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
Published on

ಮಂಗಳೂರು: ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಅಗತ್ಯತೆಯಾಗಿದ್ದು, ಆರ್ಥಿಕ ಸಮಸ್ಯೆಗಳಿಂದ ಶಿಕ್ಷಣದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ದಾನಿಗಳು ವಿದ್ಯಾರ್ಥಿ ವೇತನಗಳನ್ನು ನೀಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ರಿಜಿಸ್ಟ್ರಾರ್ ಡಾ. ಕೆ. ಜನಾರ್ಧನ್ ಹೇಳಿದರು.

ಹಿಂದು ವಿದ್ಯಾದಾಯಿನೀ ಸಂಘ ಸುರತ್ಕಲ್‌ನ ಆಡಳತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು ಮತ್ತು ಗೋವಿಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಭಕ್ತ ಶ್ರೀ ಕುತ್ತೆತ್ತೂರು ಗೋವಿಂದ ದಾಸ ಚಾರಿಟೇಬಲ್ ಟ್ರಸ್ಟ್ ಫೌಂಡೇಶನ್‌ನ ವತಿಯಿಂದ ನೀಡುತ್ತಿರುವ ಹನ್ನೊಂದನೇ ವರ್ಷದ ಶ್ರೀ ಹಯಗ್ರೀವ ಆಚಾರ್ಯ ಮತ್ತು ಭಾರತಿ ದೇವಿ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದಾಗ ವಿದ್ಯಾರ್ಥಿ ವೇತನಗಳು ಸಾರ್ಥಕವೆನಿಸುತ್ತದೆ. ಹನ್ನೊಂದು ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿ ವೇತನದ ಕೊಡುಗೆ ನೀಡುತ್ತಿರುವ ಭಕ್ತ ಶ್ರೀ ಕುತ್ತೆತ್ತೂರು ಗೋವಿಂದ ದಾಸ ಚಾರಿಟೇಬಲ್ ಟ್ರಸ್ಟ್ ಫೌಂಡೇಶನ್‌ನಿಂದ ವಿದ್ಯಾರ್ಥಿ ವೇತನ ಪಡೆದ ಅನೇಕ ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉನ್ನತ ಸಾಧನೆಗೈದು ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆದುಕೊಂಡಿರುವುದು ಸಂತಸದ ವಿಷಯ ಎಂದರು.

ಭಕ್ತ ಶ್ರೀ ಕುತ್ತೆತ್ತೂರು ಗೋವಿಂದ ದಾಸ ಚಾರಿಟೇಬಲ್ ಟ್ರಸ್ಟ್ ಫೌಂಡೇಶನ್‌ನ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್ ಅಧ್ಯಕ್ಷತೆ ವಹಿಸಿದ್ದರು.

ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ವೈ.ವಿ., ಆಡಳಿತಾತ್ಮಕ ನಿರ್ದೇಶಕರಾದ ಪ್ರೊ. ಗೋಪಾಲ ಎಂ. ಗೋಖಲೆ, ಪ್ರೊ. ರಮೇಶ್ ಭಟ್ ಎಸ್.ಜಿ. ಮತ್ತು ಪ್ರಾಂಶುಪಾಲೆ ಲಕ್ಷ್ಮೀ ಪಿ., ಭಕ್ತ ಶ್ರೀ ಕುತ್ತೆತ್ತೂರು ಗೋವಿಂದ ದಾಸ ಚಾರಿಟೇಬಲ್ ಟ್ರಸ್ಟ್ ಫೌಂಡೇಶನ್‌ನ ಕೋಶಾಧಿಕಾರಿ ಆಶಾ, ಉಪಪ್ರಾಂಶುಪಾಲ ನೀಲಪ್ಪ ವಿ., ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ., ಐಶೆ ಸಂಯೋಜಕ ಪ್ರೊ. ವಾಮನ ಕಾಮತ್, ಸ್ಟಾಫ್ ಅಸೋಸಿಯೇಶನ್‌ನ ಕಾರ್ಯದರ್ಶಿ ಗೀತಾ ಕೆ., ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಶೈಲಜಾ ಹೆಚ್., ಸದಸ್ಯ ಯೋಗೀಶ್ ಕಾಂಚನ್ ಬೈಕಂಪಾಡಿ ಹಲವರು ಇದ್ದರು.

ಭಕ್ತ ಶ್ರೀ ಕುತ್ತೆತ್ತೂರು ಗೋವಿಂದ ದಾಸ ಚಾರಿಟೇಬಲ್ ಟ್ರಸ್ಟ್ ಫೌಂಡೇಶನ್‌ನ ಕಾರ್ಯದರ್ಶಿ ಎಂ. ರಮೇಶ್ ರಾವ್ ಸ್ವಾಗತಿಸಿದರು. ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಂತೋಷ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.

-----------

ಟ್ರಸ್ಟ್‌ನ ವತಿಯಿಂದ ಕಳೆದ ಹತ್ತು ವರ್ಷಗಳಲ್ಲಿ ಗೋವಿಂದ ದಾಸ ಪದವಿ ಪೂರ್ವ ಕಾಲೇಜು ಮತ್ತು ಗೋವಿಂದ ದಾಸ ಕಾಲೇಜಿನ 631 ವಿದ್ಯಾರ್ಥಿಗಳು 31,55,000 ಮೌಲ್ಯದ ವಿದ್ಯಾರ್ಥಿವೇತನಗಳನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ವೇತನಗಳೊಂದಿಗೆ ಉಚಿತ ಮದ್ಯಾಹ್ನದ ಭೋಜನ ನಿಧಿಗೂ ಟ್ರಸ್ಟ್ ಕೊಡುಗೆಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು.

-ಡಾ. ಕೆ. ರಾಜಮೋಹನ ರಾವ್, ಅಧ್ಯಕ್ಷರು

ಭಕ್ತ ಶ್ರೀ ಕುತ್ತೆತ್ತೂರು ಗೋವಿಂದ ದಾಸ ಚಾರಿಟೇಬಲ್ ಟ್ರಸ್ಟ್ ಫೌಂಡೇಶನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net