ಶಿಕ್ಷಣವೆಂದರೆ ಪಠ್ಯ ಬೋಧನೆಯಷ್ಟೇ ಅಲ್ಲ

Oplus_131072
Oplus_131072
Published on

 ನಂಜನಗೂಡು: ಸರ್ಕಾರಿ ಶಾಲೆಯ ಮಕ್ಕಳು ಪೌರಾಣಿಕ ನಾಟಕ ಪ್ರದರ್ಶನ ಮಾಡುವ ಮೂಲಕ ವಿದ್ಯೆ ಮತ್ತು ಕಲೆ ಎರಡರಲ್ಲೂ ತಾವು ಮುಂದಿರುವುದಾಗಿ ತೋರಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಹೇಶ್ ತಿಳಿಸಿದರು.

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ಚಿನ್ನಂಬಳ್ಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ವರನಟ ಡಾ.ರಾಜಕುಮಾರ್ ಮತ್ತು ನಟ ಪುನೀತ್ ರಾಜಕುಮಾರ್ ನಟಿಸಿರುವ ಭಕ್ತ ಪ್ರಹ್ಲಾದ ಎಂಬ ಪೌರಾಣಿಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಶಾಲಾ ಆವರಣದಲ್ಲಿ ಮಕ್ಕಳಿಂದ ಪೌರಾಣಿಕ ನಾಟಕ ಮಾಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಕಲೆ, ನಾಟ್ಯ, ಸಂಸ್ಕೃತಿ, ಸಾಹಿತ್ಯ, ಜಾನಪದ ಸಾಹಿತ್ಯ, ನಾಟಕ ಸಾಹಿತ್ಯ, ಎಲ್ಲವೂ ಕೂಡ ಈ ತಂತ್ರಜ್ಞಾನದ ಯುಗದಲ್ಲಿ ಕ್ಷೀಣಿಸುತ್ತಿದೆ.

ಇಂತಹ ವೇಳೆ ಚಿನ್ನಂಬಳ್ಳಿ ಸರ್ಕಾರಿ ಶಾಲೆಯಲ್ಲಿ ಭಕ್ತ ಪ್ರಹ್ಲಾದ ಎಂಬ ಪೌರಾಣಿಕ ನಾಟಕವನ್ನು ಪ್ರದರ್ಶನ ಮಾಡುತ್ತಿರುವುದು ಸಂತಸ ತಂದಿದೆ. ಸರ್ಕಾರಿ ಶಾಲೆಗಳ ಬಗ್ಗೆ ಆಸಕ್ತಿ ಹೊಂದಿ, ಸರ್ಕಾರಿ ಶಾಲೆಗಳ ಬಲವರ್ಧನೆಯಾಗಬೇಕು. ಸರ್ಕಾರಿ ಶಾಲೆಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಮಕ್ಕಳಿಗೆ ಗುಣಮಟ್ಟದ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಶಿಕ್ಷಣ ಎಂದರೆ ಕೇವಲ ಪಾಠ ಬೋಧನೆ ಅಲ್ಲ. ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಕೂಡ ನಮ್ಮ ಸರ್ಕಾರಿ ಶಾಲೆಗಳು ಮೇಲುಗೈ ಸಾಧಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ಹಾಗೂ ಜಾನಪದ ಕಲೆಗಳನ್ನು ಹೊರ ತೆಗೆಯುವ ಕೆಲಸವನ್ನು ಸರ್ಕಾರಿ ಶಾಲೆಗಳು ಮಾಡುತ್ತಿವೆ. ಗ್ರಾಮೀಣ ಪ್ರತಿಭೆಗಳನ್ನು ಗ್ರಾಮಸ್ಥರು ಮತ್ತು ಶಿಕ್ಷಕರು ಅನಾವರಣ ಮಾಡುತ್ತಿರುವುದು ಮಾದರಿಯಾಗಿದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವುದೇ ರಂಗದಲ್ಲೂ ಕಡಿಮೆ ಇಲ್ಲ. ದಯವಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಮನವಿ ಮಾಡಿದರು.

ವಾದ್ಯಗೋಷ್ಠಿ ಮತ್ತು ಕೀಬೋರ್ಡ್ ವಾದಕ ಕೆರೆಹಳ್ಳಿ ಮಂಜುನಾಥ್, ನಾಟಕದ ನಿರ್ದೇಶಕ ಮತ್ತು ಸಂಯೋಜಕ ದರ್ಶನ್ ಮಂಜುನಾಥ್, ಖ್ಯಾತ ತಬಲವಾದಕ ಬದನವಾಳು ಲಕ್ಷ್ಮೀ ನಾರಾಯಣ ಗ್ರಾಮ ಪಂಚಾಯಿತಿ ಸದಸ್ಯರು, ಶಾಲೆಯ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net