ಆರೋಗ್ಯಕರ ಜೀವನ ಶೈಲಿ ಉತ್ತೇಜಿಸುವ ಶಿಕ್ಷಣ ಅಗತ್ಯ

ಬೇಲೂರು ಪಟ್ಟಣದ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆ ಸಭಾಂಗಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಜಾನಪದ ಪರಿಷತ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವೈ.ಎಸ್.ಸಿದ್ದೇಗೌಡ, ಡಾ.ವಿಜಯ್, ಬಿ.ಬಿ.ಶಿವರಾಜ್ , ಪ್ರಶಾಂತ್ ಕುಮಾರ್, ಡಾ.ಅನುಪಮಾ ಶೆಟ್ಟಿ ಇತರರು ಇದ್ದರು.
ಬೇಲೂರು ಪಟ್ಟಣದ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆ ಸಭಾಂಗಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಜಾನಪದ ಪರಿಷತ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ವೈ.ಎಸ್.ಸಿದ್ದೇಗೌಡ, ಡಾ.ವಿಜಯ್, ಬಿ.ಬಿ.ಶಿವರಾಜ್ , ಪ್ರಶಾಂತ್ ಕುಮಾರ್, ಡಾ.ಅನುಪಮಾ ಶೆಟ್ಟಿ ಇತರರು ಇದ್ದರು.
Published on

ಬೇಲೂರು: ಹದಿಹರೆಯದ ವಯಸ್ಸಿನಲ್ಲ್ಲಿ ದೈಹಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಗಳು ಸಾಮಾನ್ಯವಾಗಿದ್ದು, ಈ ಸಂದರ್ಭ ಯುವಕ ಯುವತಿಯರು ತಮ್ಮ ಆರೋಗ್ಯ ಮತ್ತು ಜೀವನದ ಮೇಲಾಗುವ ದುಷ್ಪರಿಣಾಮಗಳನ್ನು ಅರಿತು ಮುನ್ನಡೆಯಬೇಕು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ತಾಲೂಕು ಅಧ್ಯಕ್ಷ ವೈ.ಎಸ್.ಸಿದ್ದೇಗೌಡ ಹೇಳಿದರು.

ಪಟ್ಟಣದ ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆ ಸಭಾಂಗಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಜಾನಪದ ಪರಿಷತ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಹದಿಹರೆಯದ ಸಮಯದಲ್ಲಿ ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸುವ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸಬೇಕು. ಜತೆಗೆ ಅವರಿಗೆ ಭಾವನಾತ್ಮಕವಾಗಿ ಬೆಂಬಲ ನೀಡಿದರೆ ಯುವ ಸಮುದಾಯದ ಆರೋಗ್ಯ ಸುಧಾರಿಸಲಿದೆ. ಈ ನಿಟ್ಟಿನಲ್ಲಿ ಶಾಲಾ, ಕಾಲೇಜುಗಳ ಪಾತ್ರ ಪ್ರಮುಖವಾಗಿದೆ. ಆದ್ದರಿಂದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ನಿರಂತರವಾಗಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಂತಹ ಘಟನೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳಿಗೆ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಬಗ್ಗೆ ತಜ್ಞರಿಂದ ಮಾಹಿತಿ ನೀಡುವುದು ಅತ್ಯಗತ್ಯವಾಗಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ಹೃದಯ ಸಂಬಂಧಿ ಕಾಯಿಲೆ ಮತ್ತು ರಕ್ತನಾಳಗಳ ಮೇಲೆ ಪರಿಣಾಮ ಬೀರುವ ಕಾಯಿಲೆಗಳ ಒಂದು ಗುಂಪಾಗಿದೆ. ಇವುಗಳಲ್ಲಿ ಹೃದಯಾಘಾತ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ ಸೇರಿವೆ. ಇವುಗಳಿಗೆ ಮುಖ್ಯ ಕಾರಣ ಅವರವರ ಜೀವನಶೈಲಿ, ವಯಸ್ಸು, ಕುಟುಂಬದ ಹಿನ್ನೆಲೆ ಹಾಗೂ ಇತರ ಆರೋಗ್ಯ ಸಮಸ್ಯೆಗಳು. ಇದರ ಬಗ್ಗೆ ವಿದ್ಯಾರ್ಥಿಗಳಿಗೆ ಅಗತ್ಯ ಅರಿವು ಮೂಡಿಸಬೇಕಿದೆ ಎಂದರು.

ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಬಿ.ಶಿವರಾಜ್ ಮಾತನಾಡಿದರು. ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಪ್ರಶಾಂತ್ ಕುಮಾರ್, ವೈದ್ಯಾಧಿಕಾರಿ ಡಾ.ಅನುಪಮಾ ಶೆಟ್ಟಿ, ರೆಡ್‌ಕ್ರಾಸ್ ಸಂಸ್ಥೆ ಬಿ.ಎಚ್.ಸುಲೇಮಾನ್, ಧನಂಜಯ, ಪ್ರಾಥಮಿಕ ಶಾಲಾ ವಿಭಾಗದ ಪ್ರಾಂಶುಪಾಲ ಶ್ರೀನಿಧಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net