

ಹುಬ್ಬಳ್ಳಿ: ವ್ಯಕ್ತಿಯೊಬ್ಬರಿಗೆ ಒಂದು ದಿನ ಅನ್ನ ಮತ್ತು ಹಣ ನೀಡಬಹುದು. ನಿರಂತರವಾಗಿ ನೀಡಲಾಗುವುದಿಲ್ಲ. ಆ ವ್ಯಕ್ತಿಯೇ ನಿರಂತರವಾಗಿ ಅನ್ನ ಮತ್ತು ಹಣ ಪಡೆಯುವಂತಾಗಲು ವಿದ್ಯಾದಾನ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಅಭಿಪ್ರಾಯಪಟ್ಟರು.
ತಾಲೂಕಿನ ವರೂರಿನ ನವಗ್ರಹ ತೀರ್ಥದ ಸಭಾಭವನದಲ್ಲಿ ಎಸ್‌ಡಿಎಂ ಜೈನ ಮಠ ಟ್ರಸ್ಟ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಎಜಿಎಂ ರೂರಲ್ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕೆ ನವರತ್ನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವ್ಯಕ್ತಿಯ ಬಳಿ ಎಷ್ಟು ಹಣವಿದೆ, ಎಷ್ಟು ಜಮೀನಿದೆ ಎಂದರೆ ಯಾರೂ ಕೇಳುವುದಿಲ್ಲ. ಇದರ ಬದಲು ನಿಮ್ಮ ಮಗ, ಮಗಳು ಏನು ಓದಿದ್ದಾರೆ ಎಂದು ಕೇಳುತ್ತಾರೆ. ಇದು ಶಿಕ್ಷಣಕ್ಕೆ ಇರುವ ಶಕ್ತಿ. ವರೂರಿನ ಶ್ರೀ ಗುಣಧರನಂದಿ ಮಹಾರಾಜರು ಎಲ್ಲರಿಗೂ ಗುಣಮಟ್ಟದ ಹಾಗೂ ಅತ್ಯಂತ ಕಡಿಮೆ ಬೆಲೆಯಲ್ಲಿ ಶಿಕ್ಷಣ ಸಿಗಲಿ ಎಂದು ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣ ಕೊಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಕಾರ್ಮಿಕ ಸಚಿವ ಸಂತೋಷ ಲಾಡ ಮಾತನಾಡಿ, ಎಲ್ಲಿದಂಲೋ ಬಂದಿರುವ ಗುಣಧರನಂದಿ ಸ್ವಾಮೀಜಿ ವರೂರಿನಲ್ಲಿ ತಮ್ಮದೇ ಆದ ಸಾಮ್ರಾಜ್ಯ ಸ್ಥಾಪಿಸಿ ಸರಿ ಸುಮಾರ ಎಂಟು ಸಾವಿರ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಪೂರಕ ವಾತಾವರಣ ನಿರ್ಮಿಸಿದ್ದಾರೆ. ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣವನ್ನು ಎಲ್ಲ ಸಮುದಾಯದ ಮಕ್ಕಳಿಗೆ ಶ್ರೀಗಳು ಕೊಡುತ್ತಿದ್ದಾರೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಉದ್ಯೋಗ ಕ್ಷೇತ್ರಗಳಲ್ಲಿ ಯುವಕರಿಗೆ ಸಾಕಷ್ಟು ವಿಪುಲ ಅವಕಾಶಗಳಿವೆ. ಅತಿ ಹೆಚ್ಚು ಯುವ ಸಮುದಾಯ ಹೊಂದಿರುವ ದೇಶ ನಮ್ಮದು. ಸೇವಾ ಕ್ಷೇತ್ರ, ಉತ್ಪಾದನಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿವೆ. ಈ ನಿಟ್ಟಿನಲ್ಲಿ ಯುವರು ಉತ್ತಮ ವಿದ್ಯಾಭ್ಯಾಸ ಪಡೆದು ಸಾಧನೆ ಮಾಡಬೇಕು. 2004ರಲ್ಲಿ ಗುಣಧರನಂದಿ ಶ್ರೀಗಳು ಎಜಿಎಂ ಶಿಕ್ಷಣ ಸಂಸ್ಥೆಗಳನ್ನು ವರೂರಿನಲ್ಲಿ ಕಾರ್ಯಾರಂಭ ಮಾಡಿದಾಗ ಎಲ್.ಕೆ. ಅಡ್ವಾಣಿ ಅವರು ಭೂಮಿಪೂಜೆ ನೆರವೇರಿಸಿದ್ದರು. ಇದೀಗ ಈ ಸ್ಥಳದಲ್ಲಿ ಶ್ರೀಗಳು ಅನೇಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಅದೇ ರೀತಿ ದಾನಿಗಳು ನೀಡಿದ ದಾನವನ್ನು ಸಮರ್ಪಕವಾಗಿ ಬಳಕೆ ಮಾಡಿದ್ದಾರೆ ಎಂದರು.
ಶ್ರೀ ಗುಣಧರನಂದಿ ಮಹಾರಾಜ ಸಾನ್ನಿಧ್ಯ ವಹಿಸಿ ಮಾತನಾಡಿ, ಋಷಿ-ಮುನಿಗಳು ಬೆಳೆಸಿದ ನಾಡು ಕನ್ನಡ ನಾಡು. ಈ ನಾಡಿನಲ್ಲಿ ಅನೇಕ ಮಠಾಧೀಶರು ಶಿಕ್ಷಣ, ಅನ್ನ ದಾಸೋಹ ಮಾಡಿದ್ದಾರೆ. ಎಲ್ಲರೂ ಶಿಕ್ಷಣ ಪಡೆಯಬೇಕು ಎನ್ನುವ ಉದ್ದೇಶದಿಂದ ನಾನು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಡ ಮಕ್ಕಳಿಗೆ ಕಡಿಮೆ ದರದಲ್ಲಿ ಶಿಕ್ಷಣ ನೀಡುತ್ತಿದ್ದೇನೆ. ಅನಾಥ ಮಕ್ಕಳಿದ್ದರೆ ನಮ್ಮ ಶಿಕ್ಣ ಸಂಸ್ಥೆಗಳಲ್ಲಿ ಅವರಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಉತ್ತಮ ಶಿಕ್ಷಣ ನೀಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಶ್ರೀ ಧರ್ಮಸೇನ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಎಂ.ಆರ್. ಪಾಟೀಲ, ಪತ್ರಕರ್ತ ಅಜಿತ ಹನಮಕ್ಕನವರ, ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಕುಮಾರ ಪಾಟೀಲ, ಧಾರವಾಡ ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ ಇದ್ದರು.