ಅಂಗವೈಕಲ್ಯ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿ ತರಲು ಶಿಕ್ಷಣ ಅಗತ್ಯ

maharani college
Published on

ಮೈಸೂರು: ಅಂಗವೈಕಲ್ಯ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶಿಕ್ಷಣ ಅತ್ಯಂತ ಅವಶ್ಯಕ ಎಂದು ಮೈಸೂರು ವಿಶ್ವ ವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ಡಿ.ಆನಂದ್ ಹೇಳಿದರು.

ಸಮರ್ಥನಂ ಅಂಗವಿಕಲರ ಸಂಸ್ಥೆ, ದಿವ್ಯಾಂಗ ಸಬಲೀಕರಣ ಸಮಿತಿ, ಐಕ್ಯೂಎಸಿ ಘಟಕ, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸಂಯುಕ್ತಾಶ್ರದಲ್ಲಿ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ‘ಅಂಗವೈಕಲ್ಯ ಮತ್ತು ಅಂತರ್ಗತ ಶಿಕ್ಷಣದಲ್ಲಿ ಕಾಲೇಜು ಪ್ರಾಧ್ಯಾಪಕರ ಸಾಮರ್ಥ್ಯ ವೃದ್ಧಿ’ ವಿಷಯದ ಕುರಿತು ಮೈಸೂರು ವಿಭಾಗದ ಪ್ರಾಧ್ಯಾಪಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಅಂಗವೈಕಲ್ಯ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶಿಕ್ಷಣದ ಮಹತ್ವ ಅರಿಯಬೇಕು. ಶಿಕ್ಷಣದ ಮೂಲಕ ಅಂಗವೈಕಲ್ಯದ ಕೊರತೆ ನಿವಾರಿಸಿ, ಅವರೂ ಸಹ ದೇಶ ಹಾಗೂ ಸಮಾಜವನ್ನು ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಲು ವಿಶ್ವಸಂಸ್ಥೆಯು ಹಲವಾರು ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುತ್ತಿದೆ ಎಂದರು.

ಎಲ್ಲವೂ ಸರಿಯಾಗಿ ಇದ್ದು ಸಾಧನೆ ಮಾಡುವುದು ದೊಡ್ಡ ವಿಚಾರವಲ್ಲ. ಆದರೆ, ಸವಾಲುಗಳ ನಡುವೆ, ತಮ್ಮಲ್ಲಿರುವ ನ್ಯೂನತೆಗಳನ್ನು ನ್ಯೂನತೆಗಳೆಂದು ಭಾವಿಸದೆ ಅದನ್ನು ಸವಾಲಾಗಿ ಸ್ವೀಕರಿಸಿ ಸಾಧಿಸುವವರೇ ನಿಜವಾದ ಸಾಧಕರು. ದಿವ್ಯಾಂಗ ಹಾಗೂ ಅಂಗವಿಕಲ ವಿದ್ಯಾರ್ಥಿಗಳು ಸಾಧನೆಯಲ್ಲಿ ತೊಡಗುವಂತೆ ಪ್ರಾಧ್ಯಾಪಕರು ಸ್ಫೂರ್ತಿ ತುಂಬಬೇಕು. ಅಂಗವಿಕಲರು ಅಸಮರ್ಥರಲ್ಲ, ಅವರಲ್ಲೂ ಸಾಧಿಸುವ ಛಲ ಇರುತ್ತದೆ. ಅವರಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಶಿಕ್ಷಣದ ಸಾರ್ಥಕತೆ ಇರುವುದು ಸಾಮರ್ಥ್ಯವನ್ನು ವೃದ್ಧಿಗೊಳಿಸಿ ವ್ಯಕ್ತಿಯಲ್ಲಿ ಮನೋಬಲವನ್ನು ಕಟ್ಟುವ ಕೆಲಸದಲ್ಲಿ. ಯಾವುದೇ ವ್ಯಕ್ತಿಯನ್ನು ಸ್ವತಂತ್ರನನ್ನಾಗಿಸಿ ಪ್ರಗತಿಯಲ್ಲಿ ತೊಡಗುವಂತೆ ಮಾಡುವುದು ಶಿಕ್ಷಣದ ಮೂಲ ಉದ್ದೇಶವಾಗಿದೆ. ಎಲ್ಲ ವಿದ್ಯಾರ್ಥಿಗಳು ಕಲಿಕೆಯನ್ನು ಒಂದೇ ದೃಷ್ಟಿಯಲ್ಲಿ, ಒಂದೇ ಸಮನಾಗಿ ಪಡೆಯಲು ಸಾಧ್ಯವಾಗದೆ ಇರಲು ಅನೇಕ ಕಾರಣಗಳು ಇವೆ. ಅಂಗವೈಕಲ್ಯ ಶಾಪವಲ್ಲದೆ ಇದ್ದರೂ ಅಂಗವಿಕಲ ವ್ಯಕ್ತಿಯನ್ನು ಹಲವಾರು ಸಂದರ್ಭಗಳಲ್ಲಿ ಅಸಹಾಯಕನನ್ನಾಗಿ ಮಾಡುತ್ತದೆ. ಜಗತ್ತಿನಾದ್ಯಂತ ಅಂಗವಿಕಲತೆ ಯೊಂದಿಗೆ ಬದುಕಿ ಅಂಗವೈಕಲ್ಯವನ್ನು ಸವಾಲಾಗಿ ಸ್ವೀಕರಿಸಿ ಜಗತ್ತೇ ಬೆರಗಾಗುವ ರೀತಿಯಲ್ಲಿ ಸಾಧನೆ ಮಾಡಿದವರು ನಮ್ಮೆದುರಿಗೆ ಇದ್ದಾರೆ. ಹಾಗಾಗಿ ಸಮಾಜದಲ್ಲಿ ಅವಕಾಶ ಸಿಕ್ಕರೆ ಯಾರು ಏನನ್ನಾದರೂ ಸಾಧಿಸಬಲ್ಲರು ಅನ್ನುವಂತ ವಾತಾವರಣ ಸೃಷ್ಟಿಸಿಕೊಡಬೇಕಾದ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ.ಆರ್. ನಳಿನಿ, ಕಾಲೇಜಿನ ಐಕ್ಯೂಎಸಿ ಘಟಕದ ಸಂಚಾಲಕ ಡಾ.ವಿ.ಮಂಜುನಾಥ್, ಕಾಲೇಜಿನ ದಿವ್ಯಾಂಗ ಸಬಲೀಕರಣ ಸಮಿತಿ ಸಂಚಾಲಕ ಡಾ.ಪಿ.ವಿ. ನಾಗರಾಜ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಟ್ರಸ್ಟಿ ವಾಸಂತಿ ಸವಣೂರು, ಸಂಪನ್ಮೂಲ ವ್ಯಕ್ತಿಗಳಾದ ಡಾ.ವಿಕ್ಟರ್, ಡಾ.ಜಯಂತ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net