ಸಮಾಜದ ಉನ್ನತಿಗೆ ಶಿಕ್ಷಣ ಅಗತ್ಯ

27 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ದೇಶ ಭಕ್ತಿ ಶಿಕ್ಷಣ ನೀಡುವಲ್ಲಿ ವಿದ್ಯಾಭಾರತಿ ಉತ್ತಮ ಕಾರ್ಯ ಮಾಡುತ್ತಿದ್ದು, ವಿದೇಶಗಳಲ್ಲೂ ವಿದ್ಯಾಭಾರತಿಯ ಶಿಕ್ಷಣ ಅಳವಡಿಕೆ ಮಾಡುತ್ತಿರುವುದು ಸಂತಸದ ವಿಷಯ ಎಂದು ಭಾರತೀಯ ಶಿಕ್ಪಣ ಸಮಿತಿ ಮಾರ್ಗದರ್ಶಕ ಶ್ರೀಧರ ನಾಡಗೀರ ಹೇಳಿದರು.
ವಿದ್ಯಾಭಾರತಿ ಕರ್ನಾಟಕ ವತಿಯಿಂದ ನಗರದ ಆದರ್ಶ ಬಾಲಿಕಾ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ 2 ದಿನಗಳ ಪ್ರಾಂತ ಸಾಧಾರಣ ಸಭಾ ಬೈಠಕಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ ನಿಂತ ನೀರಾಗದೆ ಸದಾ ಹರಿಯುತ್ತಿರಬೇಕು. ಈ ನಿಟ್ಟಿನಲ್ಲಿ ಭಾರತವನ್ನು ವಿಶ್ವಗುರು ಮಾಡಲು ಶಿಕ್ಷಕರ ಪಾತ್ರ ಮಹತ್ವದ್ದು. ವ್ಯಕ್ತಿ ಮತ್ತು ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅಗತ್ಯ ಎಂದರು.
ಪ್ರಾಂತ ಸಂಘಟನಾ ಕಾರ್ಯದರ್ಶಿ ಉಮೇಶಕುಮಾರ ಮಾತನಾಡಿ, ವಿದ್ಯಾ ಭಾರತಿಯ ಶಿಕ್ಷಣ ಪದ್ಧತಿಯನ್ನು ವಿದೇಶಗಳಲ್ಲೂ ಅಳವಡಿಸಿಕೊಳ್ಳುತ್ತಿರುವುದು ಸಂತೋಷದಾಯಕ ವಿಷಯ. ನೇಪಾಳ, ಶ್ರೀಲಂಕಾ ದೇಶಗಳಲ್ಲಿ ವಿದ್ಯಾಭಾರತಿ ಶಿಕ್ಷಣ ಅಳವಡಿಸಿಕೊಂಡಿದ್ದು ಗಮನಾರ್ಹ. ಪಂಚಪರಿವರ್ತನೆ ಮೂಲಕ ಸಂಘಟನೆ ಶಕ್ತಿಯನ್ನು ಇನ್ನಷ್ಟು ಬಲಗೊಳಿಸುವ ಮೂಲಕ ಕಾರ್ಯಕ್ಕೆ ವೇಗ ನೀಡೋಣ ಎಂದರು.
ಮಿತ್ರ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ರತ್ನಾ ಪಾಟೀಲ ಮಾತನಾಡಿ, ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ಅವಶ್ಯವಿದ್ದು, ಈ ನಿಟ್ಟಿನಲ್ಲಿ ವಿದ್ಯಾಭಾರತಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸದ ಸಂಗತಿ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯು ವಿದ್ಯಾಭಾರತಿಯೊಂದಿಗೆ ಕೈ ಜೋಡಿಸಲು ಸಿದ್ಧವಿದೆ ಎಂದರು.
ಪ್ರಾಂತದ ಅಧ್ಯಕ್ಷ ಪರಮೇಶ್ವರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಣರಾವ್​, ವಸಂತ ಮಾಧವ, ವಿಜಯಾನಂದ ಶೆಟ್ಟಿ, ಶಾಂತಣ್ಣ ಕಡಿವಾಲ, ಅಶೋಕ ನಾಯಕ, ಪ್ರಾಂತದ 19 ಜಿಲ್ಲೆಗಳಿಂದ 147 ಪ್ರತಿನಿಧಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net