

ಹಿರೀಸಾವೆ: ಉನ್ನತ ಹುದ್ದೆಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸುವ ಬದಲು ಹೆಚ್ಚಿನ ಜ್ಞಾನಾರ್ಜನೆ ಸಲುವಾಗಿ ಶಿಕ್ಷಣ ಕಲ್ಪಿಸುವುದು ಅಗತ್ಯ ಎಂದು ಶಿಕ್ಷಣ ಸಮನ್ವಯಾಧಿಕಾರಿ ಅನಿಲ್ ಹೇಳಿದರು.
ಹೋಬಳಿಯ ಡಿ.ತುಮಕೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಸಲುವಾಗಿ ಮೌಲ್ಯಾಧಾರಿತ ಶಿಕ್ಷಣ ಅಗತ್ಯ ಎಂದರು.
ದೇವಾಲಯದಲ್ಲಿ ಗಂಟೆ ಹಾಗೂ ಶಾಲೆಯ ಬೆಲ್ ಮೊಳಗಿದರೆ ಆ ಗ್ರಾಮ ಪ್ರಗತಿ ಹೊಂದಿದೆ ಎಂದರ್ಥ. ಆದರೆ ಇದ್ದ ಶಾಲೆಯನ್ನು ಒಮ್ಮೆ ಮುಚ್ಚಿದರೆ ಮತ್ತೊಮ್ಮೆ ತೆರೆಯುವುದು ಕಷ್ಟ ಸಾಧ್ಯ ಎಂದು ತಿಳಿಸಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಧರ್ಮಪಾಲ್ ಮಾತನಾಡಿ, ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಿದಲ್ಲಿ ಹೊಸ ಕಟ್ಟಡ ಕಲ್ಪಿಸುವುದರ ಜತೆಗೆ ಹೆಚ್ಚುವರಿಯಾಗಿ ಶಿಕ್ಷಕರ ನೇಮಕಾತಿ ಮಾಡಲು ಅನುಕೂಲವಾಗಲಿದೆ ಎಂದರು.
ಮುಖ್ಯ ಶಿಕ್ಷಕ ರಾಮಚಂದ್ರ ಮಾತನಾಡಿ, ಪ್ರತಿ ವರ್ಷವೂ ಶಾಲಾ ಪ್ರಾರಂಭದ ಮೊದಲೇ ಪ್ರತಿ ಮನೆಗೆ ಭೇಟಿ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಪಾಲಕರಲ್ಲಿ ಮನವಿ ಮಾಡಿಕೊಂಡರೂ ಸ್ಪಂದಿಸದಿರುವುದು ಹಾಜರಾತಿ ಕೊರತೆಗೆ ಕಾರಣವಾಗಿದೆ. ಬಿಸಿಯೂಟ, ಸಮವಸ್ತ್ರ, ಕ್ಷೀರಭಾಗ್ಯ, ವಿದ್ಯಾರ್ಥಿ ವೇತನ ಸೇರಿದಂತೆ ಶೈಕ್ಷಣಿಕ ಅಭಿವೃದ್ಧಿ ಸಲುವಾಗಿ ಸರ್ಕಾರವು ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಪಾಲಕರು ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪುಟ್ಟರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ್, ವಿನೋದಮ್ಮ, ಕನ್ಯಾಕುಮಾರಿ, ಮಾಜಿ ಉಪಾಧ್ಯಕ್ಷ ಟಿ.ಎಲ್.ರವಿಕುಮಾರ್, ದಿಡಗ ಸೊಸೈಟಿ ಮಾಜಿ ಅಧ್ಯಕ್ಷ ನಿಂಗೇಗೌಡ, ಶಿಕ್ಷಣ ಸಂಯೋಜಕ ಶ್ರೀನಿವಾಸ್, ಎಸ್‌ಡಿಎಂಸಿ ಅಧ್ಯಕ್ಷ ವಸಂತ ಕುಮಾರಾಚಾರ್, ಉಪಾಧ್ಯಕ್ಷೆ ಶ್ರುತಿ, ಸಹಶಿಕ್ಷಕ ಬಿ.ಬಿ.ಉಮೇಶ್, ಅತಿಥಿ ಶಿಕ್ಷಕಿ ಲಾವಣ್ಯಾ ಇತರರು ಇದ್ದರು.