

ಮಡಿಕೇರಿ: ಯಾವುದೇ ವಿಷಯದಲ್ಲಿ ಸಾಧನೆ ಮಾಡಬೇಕಾದರೆ ನಾವು ವಿದ್ಯಾವಂತರಾಗಿರಬೇಕು ಎಂದು ನಿವೃತ್ತ ಪ್ರಾಂಶುಪಾಲ ಡಾ.ಜೆ.ಸೋಮಣ್ಣ ನುಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸರ್.ಮೋಕ್ಷಗುಂಡಂ ವಿಶ್ವೇಶ್ವರಯ್ಯರವರ ಜನ್ಮ ದಿನದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಸರ್.ಎಂ.ವಿಶ್ವೇಶ್ವರಯ್ಯ ರವರು ಮೈಸೂರು ಸಂಸ್ಥಾನದ ದಿವಾನರಾಗಿದ್ದು ಜನ ಜೀವನದ ಭಾಗವಾಗಿದ್ದರು. ಕನ್ನಂಬಾಡಿ ಕಟ್ಟೆ ಕಟ್ಟುವ ಮೂಲಕ ಲಕ್ಷಾಂತರ ಜನರ ಬದುಕಿಗೆ ಬಲ ನೀಡಿದವರು. ಅಂದಿನ ಕಾಲದಲ್ಲೆ ಕೈಗಾರಿಕಾ ಕ್ರಾಂತಿ ಮಾಡಿ ಹಲವಾರು ಕೈಗಾರಿಕೆಗಳನ್ನು ಸ್ಥಾಪಿಸಿದವರು ಎಂದರು.
ಜೀವನದಲ್ಲಿ ವಿಧ್ಯೆಯನ್ನು ಅಳವಡಿಸಿಕೊಂಡಿರುವವರು ಸರ್.ಎಂ.ವಿಶ್ವೇಶ್ವರಯ್ಯರವರು. ತಮ್ಮ ಜೀವನವನ್ನೇ ಸಮಾಜಕ್ಕೆ ಮುಡಿಪಾಗಿಟ್ಟವರು. ಕರ್ನಾಟಕದಲ್ಲಿ ಹುಟ್ಟಿ ಭಾರತದ ಭಾಗ್ಯೋದಯವಾದವರು ಎಂದು ಜೆ.ಸೋಮಣ್ಣ ನುಡಿದರು.
ಮಡಿಕೇರಿ ನಗರ ಸಭಾ ಆಯುಕ್ತ ವಿಜಯ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಇಂತಹ ಸಾಧಕರ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸಲು ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಸರ್.ಎಂ.ವಿಶ್ವೇಶ್ವರಯ್ಯರವರ ಆದರ್ಶ ತ್ಯಾಗ, ಶಿಸ್ತುಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಐಟಿಐ ಕಾಲೇಜಿನ ಪ್ರಾಂಶುಪಾಲ ಕೆ.ಎಚ್.ಪಂಡಿತಾರಾದ್ಯ, ವಿದ್ಯಾರ್ಥಿಗಳು ಶಿಸ್ತು ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು. ನಾವು ಮಾಡುವ ಕೆಲಸದಲ್ಲಿ ಶಿಸ್ತು ಪ್ರಾಮಾಣಿಕತೆ ಇದ್ದರೆ ನೀವು ಕೂಡ ವಿಶ್ವೇಶ್ವರಯ್ಯ ಆಗಬಹುದು. ನಿಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ನೀವೂ ಕೂಡ ಬೆಳೆಯಲು ಸಾಧ್ಯವಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಉಪ ನಿರ್ದೇಶಕ ಚಿನ್ನಸ್ವಾಮಿ, ಮಡಿಕೇರಿ ನಗರಸಭಾ ಉಪಾಧ್ಯಕ್ಷೆ ಸವಿತಾ ರಾಕೇಶ್, ಕಸಾಪದ ಜಿಲ್ಲಾ ಗೌರವ ಕಾರ್ಯದರ್ಶಿ ಮುನೀರ್ ಅಹಮದ್, ಗೌರವ ಕೋಶಾಕಾರಿ ಎಂ.ಬಿ.ಜೋಯಪ್ಪ, ಚೊಕ್ಕಾಡಿ ಪ್ರೇಮಾ ರಾಘವಯ್ಯ ಮತ್ತು ಸುಶೀಲ, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಅಂಬೆಕಲ್ ನವೀನ್ ಉಪಸ್ಥಿತರಿದ್ದರು.