ವಿದ್ಯೆಯೇ ಶಾಶ್ವತ ಸಂಪತ್ತು

mundargai
Published on

ಮುಂಡರಗಿ: ನಾವೆಲ್ಲರೂ ಒಂದು ಎನ್ನುವ ಸಂಸ್ಕೃತಿ ಬರಬೇಕು. ಜನಪದ ಸಂಸ್ಕೃತಿ ಎಂದರೆ ಮೌಲ್ಯಗಳ ಗುಚ್ಛ. ನಾಡು, ದೇಶದ ವಿಷಯ ಬಂದಾಗ ಪ್ರಾಣ ಕೊಡುವಂತಹ ವ್ಯಕ್ತಿತ್ವ ಹೊಂದಬೇಕು. ಜಗತ್ತಿಗೆ ಅನ್ನ ಕೊಡುವ ಶಕ್ತಿ ರೈತನಿಗಿದೆ. ಜನಪದ ಕಲೆ, ಸಂಸ್ಕೃತಿ,ಉಳಿಸಿ ಬೆಳೆಸುವ ಕೆಲಸ ಆಗಬೇಕು. ಜನಪದವೇ ಜಗದ ಜೀವನಾಡಿ ಎಂದು ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಹೇಳಿದರು.

ಪಟ್ಟಣದ ಕ.ರಾ. ಬೆಲ್ಲದ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಗಳ ಸೌರಭ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊನೆಯಾಗದಿರುವ ಸಂಸ್ಕೃತಿ ಎಂದರೆ ಜನಪದ. ನಾಡಿನ ಇತಿಹಾಸ ತಿಳಿಯಬೇಕಾದರೆ ವಿದ್ಯಾರ್ಥಿಗಳು ಪುಸ್ತಕಗಳನ್ನು ಓದಿ ಅಧ್ಯಯನ ಶೀಲರಾಗಬೇಕು. ಸಂಪತ್ತು ಶಾಶ್ವತವಲ್ಲ, ನಮಗೆ ವಿದ್ಯೆ ಶಾಶ್ವತ ಎಂದರು.

ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಮಾತನಾಡಿ, ಪ್ರತಿ ಹಂತದಲ್ಲಿ ಭಾರತೀಯ ಸಂಸ್ಕೃತಿ ಉಳಿಸುವ ಕೆಲಸ ಮಾಡಬೇಕು. ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯ ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಆರ್.ಎಲ್. ಪೊಲೀಸ್ ಪಾಟೀಲ ಮಾತನಾಡಿ, ಜನಪದ ಸಾಹಿತ್ಯ ಬದುಕಿಗೆ ಮೂಲ. ಸಂಸ್ಕೃತಿ ಉಳಿಸಿ ಬೆಳೆಸಬೇಕಾದರೆ ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪುಸ್ತಕಗಳೇ ನಿಮ್ಮ ಆಸ್ತಿ. ಪುಸ್ತಕದ ಮಹತ್ವ ಅರಿಯಬೇಕು. ಪುಸ್ತಕಗಳು ಜಗತ್ತನ್ನು ಪರಿಚಯಿಸುವ ಕೆಲಸ ಮಾಡುತ್ತವೆ. ಕಳೆದುಹೋದ ಸಮಯ ಜೀವನದಲ್ಲಿ ಮತ್ತೆಂದೂ ಬರುವುದಿಲ್ಲ. ಸಮಯಕ್ಕೆ ಹೆಚ್ಚು ಬೆಲೆ ಕೊಡಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ವಿದ್ಯಾರ್ಥಿಗಳು, ಕಾಲೇಜ್ ಸಿಬ್ಬಂದಿ ಸಾಂಸ್ಕೃತಿಕ ಉಡುಗೆ ತೊಡುಗೆಗಳನ್ನು ತೊಟ್ಟು ಜಗದ್ಗುರು ಅನ್ನದಾನೀಶ್ವರ ಮಠದಿಂದ ಮೆರವಣಿಗೆ ಮೂಲಕ ಕಾಲೇಜ್ ವೇದಿಕೆ ತಲುಪಿದರು. ಎಂ.ಎಸ್. ಶಿವಶೆಟ್ಟರ, ಡಾ.ಆರ್.ಎಚ್. ಜಂಗಣವಾರಿ, ಡಾ.ವನಜಾಕ್ಷಿ ಭರಮಗೌಡರ, ಕಾಲೇಜ್ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದಿವ್ಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು.

ಪ್ರಾಚಾರ್ಯ ಡಾ. ಡಿ.ಸಿ.ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಸಂಗೀತ ಶೆಟ್ಟರ ಸ್ವಾಗತಿಸಿದರು. ತೇಜಶ್ವಿನಿ ಶಲವಡಿ ಹಾಗೂ ಸಚಿನ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net