

ಮೈಸೂರು: ಸಮಾಜದಲ್ಲಿ ಸರ್ವತೋಮುಖ ಬೆಳವಣಿಗೆ ಹೊಂದಲು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯವಶ್ಯವಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಿ.ಪುಟ್ಟಸ್ವಾಮಿ ಹೇಳಿದರು.
ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಟರಾಜ ಸಭಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಸ್ನೇಹ ಸಿಂಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕಾದ್ದು ಪಾಲಕರ ಕರ್ತವ್ಯವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಾರ್ಗದರ್ಶನದ ಕೊರತೆಯಿಂದಾಗಿ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೊಂದಿರುವುದನ್ನು ನಿವಾರಿಸಬೇಕಿದೆ ಎಂದರು.
ವಿದ್ಯೆ ಯಾರ ಮನೆಯ ಸ್ವತ್ತು ಅಲ್ಲ. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಬಡ ಮಕ್ಕಳು ರ‌್ಯಾಂಕ್ ಗಳಿಸಿರುವುದು ಇದಕ್ಕೆ ಸಾಕ್ಷಿ. ವಿದ್ಯೆಯ ವಿಷಯದಲ್ಲಿ ಬಡವ ಮತ್ತು ಶ್ರೀಮಂತ ಎಂಬ ಭೇದ-ಭಾವ ಇಲ್ಲ. ನಿರಂತರ ಅಭ್ಯಾಸ ಮಾಡಿದರೆ ಶಿಕ್ಷಣ ಎಲ್ಲರಿಗೂ ಒಲಿಯಲಿದೆ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮವಾಗಿ ಓದಿದ್ದರೆ ನೀವು ಮುಂದಿನ 30 ವರ್ಷ ಚೆನ್ನಾಗಿ ಇರಬಹುದು. ಜತೆಗೆ, ಪಾಲಕರನ್ನೂ ಉತ್ತಮವಾಗಿ ನೋಡಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ದೇಶದ ಪ್ರಗತಿಯ ಅಳತೆಗೋಲು ಶಿಕ್ಷಣವಾಗಿದೆ. ಪ್ರತಿಯೊಬ್ಬರ ಭವಿಷ್ಯ ಬೇರೆಯವರ ಕೈಯಲ್ಲಿ ಇಲ್ಲ. ಅದು ನಿಮ್ಮ ಕೈಯಲ್ಲಿ ಇದೆ. ಸರ್ಕಾರಿ ಸೌಲಭ್ಯವನ್ನು ಪರಿಣಾಮಕಾರಿ ಆಗಿ ಬಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಾಯಕ ರಾಘವೇಂದ್ರ ರತ್ನಾಕರ್, ಚಿಂತಕಿ ಡಾ.ಎ.ಪುಷ್ಪಾ ಅಯ್ಯಂಗಾರ್, ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಪ್ರಾಂಶುಪಾಲರಾದ ಡಾ.ಎಂ.ಶಾರದಾ, ಸಂಚಾಲಕಿ ಎಂ.ಎಸ್.ಸಂಧ್ಯಾರಾಣಿ ಇನ್ನಿತರರಿದ್ದರು.