

ಕಳಸ: ಜಗತ್ತಿನಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೂ ಶಿಕ್ಷಣ ಅತ್ಯವಶ್ಯಕ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು. ಕಳಸ ತಾಲೂಕಿನ ಹಿರೇಬೈಲು ಹಿರಿಯ ಪ್ರಾಥಮಿಕ ಪಾಠ ಶಾಲೆಯ ಎರಡು ನೂತನ ಕೊಠಡಿ, ಕಳಸ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಮೂರು ಕೊಠಡಿಗಳ ಉದ್ಘಾಟನೆ ಹಾಗೂ ಪುಷ್ಠಿ ಕಾರ್ಯಕ್ರಮದಡಿ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿ ಆಯ್ಕೆ ಪ್ರಯುಕ್ತ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾನು ಇಂದು ಶಾಸಕಿಯಾಗಿ ಉತ್ತಮ ಹೆಸರು ಪಡೆಯಲು, ನನ್ನನ್ನು ನಾನು ಗುರುತಿಸಿಕೊಳ್ಳಲು ನನ್ನ ಉನ್ನತ ಮಟ್ಟದ ವಿದ್ಯಾಭ್ಯಾಸವೇ ಕಾರಣ ಎಂದರು.
ಕಳಸ ಕೆಪಿಎಸ್ ಸರ್ಕಾರಿ ಶಾಲೆಯಾದರೂ ಒಂದು ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಸರ್ಕಾರಿ ಶಾಲೆಗಳಲ್ಲಿ ಜಿಲ್ಲೆಯಲ್ಲಿಯೇ ಉತ್ತಮವಾದ ಲಿತಾಂಶ ತಂದುಕೊಟ್ಟಿದೆ. ಇಲ್ಲಿನ ವಿದ್ಯಾರ್ಥಿನಿ 625ಕ್ಕೆ 618 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕೇವಲ ಪಠ್ಯ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಯಲ್ಲೂ ಮುಂದಿರುವ ಈ ಶಾಲೆ ವಿದ್ಯಾರ್ಥಿಗಳು ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಎಸ್‌ಡಿಎಂಸಿ ಸದಸ್ಯರು, ಪ್ರತಿಭಾನ್ವಿತ ವಿದ್ಯಾರ್ಥಿಗಳು, ಕೆಪಿಎಸ್ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗದ ಶಿಕ್ಷಕರನ್ನು ಗೌರವಿಸಲಾಯಿತು. ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್ ಇತರರು ಇದ್ದರು.