

ಮುಧೋಳ: ಗುಣಮಟ್ಟದ ಶಿಕ್ಷಣದಿಂದ ಮಾತ್ರ ಮಹಿಳೆಯರ ಸಬಲೀಕರಣ ಸಾಧ್ಯ. ಮುಖ್ಯವಾಗಿ ಹೆಣ್ಣು ಮಗುವಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತಾಗುತ್ತದೆ. ಮಹಿಳೆಯರು ಎಲ್ಲ ರಂಗಗಳಲ್ಲೂ ಪುರುಷರಿಗೆ ಸರಿಸಮಾನರಾಗಿ ನಿಲ್ಲಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾದ್ಯವಿದೆ ಎಂದು ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ತಿಮ್ಮಣ್ಮ ಅರಳಿಕಟ್ಟಿ ಹೇಳಿದರು.
ಪಟ್ಟಣದ ಬಿವಿವಿ ಸಂಘದ ಶ್ರೀ ಎಸ್.ಆರ್.ಕಂಠಿ ಕಾಲೇಜಿನ ಐಕ್ಯೂಎಸಿ ಅಡಿಯಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ, ವಿದ್ಯಾರ್ಥಿನಿಯರ ಒಕ್ಕೂಟ ಹಾಗೂ ಮಹಿಳಾ ಸಬಲೀಕರಣ ಘಟಕದ ಸಮಾರೋಪ ಸಮಾರಂಭ ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿನಿಯರು ತಮಗೆ ಸಿಕ್ಕ ಅವಕಾಶಗಳನ್ನು ಹಿಂಜರಿಯದೆ ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿನಿಯರು ಸನ್ಮಾರ್ಗದ ಬದುಕನ್ನು ರೂಪಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದರು.
ಪಿಎಸ್‌ಐ ಅಜಿತಕುಮಾರರಡ್ಡಿ ಹೊಸಮನಿ ಮಾತನಾಡಿ ಇಂದಿನ ಯುವ ಜನಾಂಗವು ಸಮಾಜಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡು ಹದಿಹರೆಯದ ವಯಸ್ಸಿನಲ್ಲಿಯೇ ಅಪರಾಧಿಗಳಾಗುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳ ಬಗ್ಗೆ ಉನ್ನತ ಕನಸುಗಳನ್ನು ಕಟ್ಟಿಕೊಂಡು ಶಿಕ್ಷಣ ಕಲಿಸಲು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೆ ಕಳಿಸುತ್ತಿದ್ದಾರೆ. ಅವರ ಕನಸುಗಳಿಗೆ ನಿರಾಸೆಗೊಳಿಸದೆ ಶ್ರಮಪಟ್ಟು ವಿದ್ಯಾಭ್ಯಾಸ ನಡೆಸಿ ನಾಡಿಗೆ ಕೀರ್ತಿ ತರಬೇಕು. ಪದವಿ ಶಿಕ್ಷಣ ಪೂರೈಸಿದ ನಂತರ ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ನಿಭಾಯಿಸುವ ಸಾಮರ್ಥ್ಯ ಬೆಳಸಿ ಕೊಳ್ಳಬೇಕು ಎಂದರು.
ಪ್ರಾಚಾರ್ಯ ಪ್ರೊ.ಎಂ.ವಿ ಜಿಗಬಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಿದಷ್ಟೆ, ಕ್ರೀಡೆ, ಕಲೆ, ಸಂಸಕ್ಕತಿ ಕ್ಷೇತ್ರ ಅಭಿವೃದ್ಧಿ ಸಾಧಿಸುತ್ತದೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ, ಪೋಷಕರು ಕೇವಲ ಪಠ್ಯ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಸರ್ವತೋಮುಖ ಬೆಳವಣಿಗೆಗೆ ಮಕ್ಕಳು ಅಸಕ್ತಿ ತೋರಿಸಬೇಕು ಎಂದರು.
ಡಾ.ಪ್ರಹ್ಲಾದ ಕೆ. ಸ್ವಾಗತಿಸಿದರು, ಪ್ರೊ. ಪ್ರೀತಿ ಕರಡಿ ಮತ್ತು ಪ್ರೊ.ಕವಿತಾ ಶಿವಪ್ಪಯ್ಯನಮಠ ಅವರು ವಾರ್ಷಿಕ ವರದಿವಾಚನ ಮಾಡಿದರು. ಐಕ್ಯೂಎಸಿ ಸಂಯೋಜಕ ಪ್ರೊ.ಎ.ಆರ್.ಕಡೂರ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಎ.ವೈ.ಮುನ್ನೊಳ್ಳಿ, ವಿದ್ಯಾರ್ಥಿ ಪ್ರತಿನಿಧಿ ರಾಧಿಕಾ ಮಠಪತಿ ಇದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳನ್ನು, ಅತಿಥಿಗಳನ್ನು, ಕೆ.ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರೊ.ಎ.ಹೆಚ್.ಹಿರೇಮಠ ಮತ್ತು ಜಿ.ಪಿ.ಕೋಟೂರ ಅವರನ್ನು ಸನ್ಮಾನಿಸಲಾಯಿತು. ಡಾ.ರವೀಂದ್ರ ಕತ್ತಿ ನಿರೂಪಿಸಿದರು, ಡಾ.ಲೋಕೇಶ ರಾಠೋಡ ವಂದಿಸಿದರು, ಭಾಗ್ಯಾ ಚಿನಿವಾಲ ಪ್ರಾರ್ಥಿಸಿದರು.