

ಸರಗೂರು: ಉತ್ತಮ ಸಮಾಜಕ್ಕಾಗಿ ಪ್ರತಿ ಮಗುವಿಗೂ ಶಿಕ್ಷಣ ಕೊಡಿಸಬೇಕು. ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಗೆಜ್ದಗಾರ ಸಮಿತಿ ರಾಜ್ಯ ಕಾರ್ಯದರ್ಶಿ ಗೋಳೂರು ಸ್ನೇಕ್ ಬಸವರಾಜು ಹೇಳಿದರು.
ರಾಜ್ಯ ಗೆಜ್ಜಗಾರ ರಕ್ಷಣಾ ಸಮಿತಿಯಿಂದ ತಾಲೂಕಿನ ಹಾದನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಶಾಲೆಯ ಧ್ವನಿವರ್ಧಕ ಮತ್ತು ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರಿ ಶಾಲೆಗಳ ಬಲವರ್ಧನೆ ಮುಖ್ಯವಾದದ್ದು. ಖಾಸಗಿ ಶಾಲೆಗಳಲ್ಲಿ ದೊರೆಯುವ ಎಲ್ಲ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿ ದೊರೆಯುವಂತಾಗಬೇಕು. ಇದರಿಂದ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಗೆಜ್ಜೆಗಾರ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ರಾಜಕೀಯವಾಗಿ ತೀರಾ ಹಿಂದುಳಿದಿದ್ದರು ಸಮಾಜ ಸೇವೆಯಲ್ಲಿ ಮುಂದಿದ್ದಾರೆ. ಈಗಿನ ಸಾಮಾಜಿಕ ಪಿಡುಗು, ಮೂಢನಂಬಿಕೆ ಇದಕ್ಕೆಲ್ಲ ಮೂಲ ಕಾರಣ ಶಿಕ್ಷಣದ ಕೊರತೆ. ಹಾಗಾಗಿ, ಎಲ್ಲ ಮಕ್ಕಳಿಗೂ ಶಿಕ್ಷಣ ಅಗತ್ಯವಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಶಾಂತಮ್ಮ ಮಾತನಾಡಿ, ಗೆಜ್ಜಗಾರ ಸಮಿತಿಯವರು ಸರ್ಕಾರಿ ಶಾಲೆಗಳನ್ನು ಗುರುತಿಸಿ ಉದ್ದೇಶಪೂರ್ವಕವಾಗಿ ಶಾಲಾ ವಿದ್ಯಾರ್ಥಿಗಳಿಗೆ ಕಿರು ಧ್ವನಿವರ್ಧಕ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಪ್ರಕಾಶ್ ಹಾದನೂರು, ಸದಸ್ಯ ಭಾಗ್ಯಕೇಂಪಸಿದ್ದ, ಮುಖಂಡ ಕೆಂಪಸಿದ್ದ, ಎಸ್ಡಿಎಂಸಿ ಅಧ್ಯಕ್ಷ ನಂಜಪ್ಪ, ಗೆಜ್ಜೆಗಾರರ ರಕ್ಷಣಾ ಸಮಿತಿ ಸದಸ್ಯ ಹೊಸ ವೀಡು ಅಶೋಕ್, ನಂಜನಗೂಡು ನಟರಾಜ್ ಉಪಸ್ಥಿತರಿದ್ದರು.