ಶ್ರದ್ಧೆ, ಆಸಕ್ತಿ ಇದ್ದರೆ ವಿದ್ಯೆ ಸುಲಭ

03bhr 2
Published on

ಬಾಳೆಹೊನ್ನೂರು: ದೇಶದ ರಕ್ಷಣೆ, ಅಭಿವೃದ್ಧಿಗೆ ಮಿಡಿಯುವ ಮನಸ್ಸು ವಿದ್ಯಾರ್ಥಿಗಳಿಗೆ ಬರಬೇಕಿದೆ ಎಂದು ಬಿಇಒ ಕೆ.ಆರ್.ಪುಷ್ಪಾ ಹೇಳಿದರು.
ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಾಳೆಹೊನ್ನೂರು ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶ್ರದ್ಧೆ, ಆಸಕ್ತಿ ಇದ್ದರೆ ವಿದ್ಯೆ ಸುಲಭವಾಗಿ ಲಭಿಸಲಿದೆ. ಶಿಕ್ಷಣ ಪಡೆದವರು ವಿದ್ಯಾವಂತ, ಬುದ್ಧವಂತ, ಚಾರಿತ್ರೃವಂತರಾಗಿರಬೇಕು ಎಂದರು.
ದೇಶದ ಅಭಿವೃದ್ಧಿ ಕಡೆಗೆ ಚಿಂತಿಸುವ ಮನಸ್ಸು ಹೊಂದಿರಬೇಕು. ದೈಹಿಕ ಸಮತೋಲನಕ್ಕೆ ಮಾನಸಿಕ ಸಮತೋಲನ ಅಗತ್ಯ. ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಇವುಗಳು ಲಭಿಸುತ್ತದೆ. ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರದಲ್ಲೂ ಬೆಳೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ವಿವಿಧ ಚಟುವಟಿಕೆಗಳನ್ನು ಆಯೋಜನೆ ಮಾಡುತ್ತಿದೆ. ವಿದ್ಯಾರ್ಥಿಗಳು ಇದರಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಮಾತನಾಡಿ, ಕ್ರೀಡೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸದೃಢಗೊಳಿಸಲಿದ್ದು, ಇಂದು ಆನ್‌ಲೈನ್ ಕ್ರೀಡೆಗಳಿಂದ ವಿದ್ಯಾರ್ಥಿಗಳು ಕ್ರೀಡಾಂಗಣದ ಆಟದಲ್ಲಿ ಭಾಗವಹಿಸುವುದು ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಮೊಬೈಲ್, ಆನ್‌ಲೈನ್‌ನಿಂದ ದೂರವಿದ್ದು, ಸಕ್ರಿಯವಾಗಿ ಆಟಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ ಮಾತನಾಡಿ, ಕ್ರೀಡಾ ಪ್ರತಿಭೆ ಹೊರಹೊಮ್ಮಿಸಲು ಕ್ರೀಡಾಕೂಟಗಳು ಪೂರಕವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯು ಅವಿಭಾಜ್ಯ ಅಂಗವಾಗಿದೆ ಎಂದರು.
ಗ್ರಾಪಂ ಸದಸ್ಯ ಎಂ.ಎಸ್.ಅರುಣೇಶ್ ಕ್ರೀಡಾ ಜ್ಯೋತಿ ಸ್ವೀಕರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ರಂಜಿತಾ, ಸದಸ್ಯರಾದ ಇಬ್ರಾಹಿಂ ಶಾಫಿ, ಸರಿತಾ, ಶಿವಪ್ಪ, ಶಶಿಕಲಾ, ರವಿಚಂದ್ರ, ಹಿರಿಯ ಕ್ರೀಡಾಪಟು ಓ.ಡಿ.ಸ್ಟೀನ್, ಹೇಮಲತಾ, ಸತೀಶ್ ಅರಳೀಕೊಪ್ಪ, ಶೇಖರ್ ಇಟ್ಟಿಗೆ, ಸೋಮಶೇಖರ್, ನಂಜುಂಡಪ್ಪ, ಸುಭಾಷ್, ಕಟ್ಟೇಗೌಡ, ದೀಪಾ, ಜಾನ್ ಡಿಸೋಜಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net