

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅನಿಸಿಕೆ l ವಿವಿಧ ವೇದಿಕೆಗಳ ಸಮಾರೋಪ
ಹೊನ್ನಾಳಿ: ವಿದ್ಯೆ ಯಾರೂ ಕದಿಯಲಾಗದ ಮುಖ್ಯವಾದ ಸಂಪತ್ತು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಹಿರೇಕಲ್ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಪ್ರಥಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2023-214ನೇ ಸಾಲಿನ ಕ್ರೀಡೆ, ಎನ್ನೆಸ್ಸೆಸ್, ವಿವಿಧ ವೇದಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ದೇಶದ ಭವಿಷ್ಯ ರೂಪಿಸುವ ಶಕ್ತಿ ಇರುವುದು ವಿದ್ಯಾರ್ಥಿಗಳಿಗೆ ಮಾತ್ರ. ಇಂತಹ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಸಾಮರ್ಥ್ಯವಿರುವುದು ಗುರುಗಳಿಗೆ ಮಾತ್ರ ಇದೆ ಎಂದು ಅಭಿಪ್ರಾಯಪಟ್ಟರು.
ಜನಪ್ರತಿನಿಧಿಗಲಾಗಿ ಸೇವೆ ಸಲ್ಲಿಸಿದವರು ಒಮ್ಮೆ ಮಾಜಿಗಳಾಗುತ್ತಾರೆ. ಆದರೆ, ವಿದ್ಯಾರ್ಥಿಗಳು ಎಂದಿಗೂ ಮಾಜಿಯಾಗುವುದಿಲ್ಲ. ಅವರನ್ನು ಹಳೇ ವಿದ್ಯಾರ್ಥಿಗಳೆನ್ನಬಹುದು. ಆದರೆ, ಮಾಜಿ ಎನ್ನುವುದಿಲ್ಲ ಎಂದು ಹೇಳಿದರು.
ಸನ್ಮಾರ್ಗದಲ್ಲಿ ಶಿಸ್ತು, ಶ್ರದ್ಧೆ ಕಲಿತವರು ಮುಂದೆ ಸಮಾಜದಲ್ಲಿ ಸಂಸ್ಕಾರಯುತ ಪ್ರಜೆಯಾಗಲಿದ್ದಾರೆ. ಅಂಕ ಗಳಿಕೆಗೆ ಮಾತ್ರ ಶಿಕ್ಷಣವಲ್ಲ. ಮೌಲ್ಯಾಧಾರಿತ ಜೀವನ ನಡೆಸಲೂ ಶಿಕ್ಷಣ ಬೇಕು ಎಂದರು.
ಇನ್‌ಸೈಟ್ ಐಎಎಸ್ ತರಬೇತಿ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್ ಮಾತನಾಡಿ, ಪ್ರತಿ ವಿದ್ಯಾರ್ಥಿವೂ ಪದವಿ ಮುಗಿಸುತ್ತಿದ್ದಂತೆಯೇ ಅವರಿಗೆ ಮುಂದೇನು ಎನ್ನುವ ಪ್ರಶ್ನೆ ಕಾಡುತ್ತಿರುತ್ತದೆ. ಇದು ಸಹಜ ಕೂಡ. ಈ ಹಂತದಲ್ಲಿ ವಿದ್ಯಾರ್ಥಿಗಳು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವರ ಭವಿಷ್ಯ ನಿರ್ಧಾರವಾಗುತ್ತದೆ ಎಂದು ಹೇಳಿದರು.
ಯಾವುದೇ ವಿದ್ಯಾರ್ಥಿಗೂ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಕೀಳರಿಮೆ ಇರಬಾರದು. ಏನೇ ಆದರೂ ತಾನೂ ಸಾಧಿಸಿಯೇ ತೀರುತ್ತೇನೆ ಎನ್ನುವ ಧನಾತ್ಮಕ ಚಿಂತನೆ ಇರಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಪದವಿ ಪೂರ್ಣಗೊಳಿಸಿ ಕಾಲೇಜಿನಿಂದ ನಿರ್ಗಮಿಸುತ್ತಿರುವ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕ್ರೀಡಾ ಮತ್ತು ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯ ಡಾ. ಪ್ರವೀಣ್‌ಗೌಡ್ರು ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಚನ್ನಯ್ಯ ಬೆನ್ನೂರುಮಠ, ದಾವಣಗೆರೆ ವಿವಿಯ ಪ್ರಥಮ ರ‌್ಯಾಂಕ್ ಪಡೆದ ಕಾಲೇಜಿನ ವಿದ್ಯಾರ್ಥಿನಿ ಎಸ್. ಸಿಂಧೂಬಾಯಿ, ಉಪನ್ಯಾಸಕ ಕೆ. ನಾಗೇಶ್, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ ನರಗಟ್ಟಿ ಇತರರಿದ್ದರು.