ವಿದ್ಯೆ ಯಾರೂ ಕದಿಯಲಾಗದ ಸಂಪತ್ತು

2
Published on

ವಿದ್ಯೆ ಇದ್ದರೆ ಕೆಟ್ಟ ನಡತೆ ಹಾಗೂ ದುಷ್ಟ ಗುಣಗಳು ಇರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ವಿದ್ಯೆ ಪಡೆಯಬೇಕು ಎಂದು ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.

ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಕೆ.ಆರ್.ವನಂನಲ್ಲಿ ನಿರ್ಮಿಸಿರುವ ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಸಂಪಾದಿಸಿದ ಸಂಪತ್ತನ್ನು ಕಳೆದುಕೊಳ್ಳುತ್ತೇವೆ. ಹಣವನ್ನು ಕಳ್ಳರು ಕಳ್ಳತನ ಮಾಡಬಹುದು. ಆದರೆ ನಾವು ಕಲಿತ ವಿದ್ಯೆಯನ್ನು ಯಾರೂ ಕಳ್ಳತನ ಮಾಡಲು ಆಗಲ್ಲ. ವಿದ್ಯೆಯನ್ನು ಸಂಗ್ರಹಿಸಿದರೆ ಶಾಶ್ವತವಾಗಿರುತ್ತದೆ ಎಂದರು.

ಎಲ್ಲ ರಂಗದಲ್ಲೂ ಹೊಯ್ಸಳ ಕರ್ನಾಟಕದವರು ಇದ್ದಾರೆ. ಜೈನ ಮೂಲವನ್ನು ಇಲ್ಲಿ ನೋಡಬಹುದು. ಜನಾಂಗ ಐತಿಹಾಸಿಕ ಹಿನ್ನೆಲೆ ಹೊಂದಿದೆ ಎಂದರು.
ಹೊಯ್ಸಳ ಕರ್ನಾಟಕ ಸಂಘದ ಕಾರ್ಯದರ್ಶಿ ಪಿ.ಶ್ರೀನಿಧಿ ಮಾತನಾಡಿ, ಕೆ.ಆರ್.ವನಂನಲ್ಲಿ 1.3 ಎಕರೆ ಜಾಗದಲ್ಲಿ ಸಂಘದ ವತಿಯಿಂದ ನೂತನವಾಗಿ ಬಾಲಕರ ವಿದ್ಯಾರ್ಥಿ ನಿಲಯ ನಿರ್ಮಿಸಲಾಗಿದೆ. ಈ ಕಟ್ಟಡಕ್ಕೆ ಸುಮಾರು 35 ಜನ ದಾನಿಗಳು ತಲಾ 2.5 ಲಕ್ಷ ರೂ.ಗಳನ್ನು ನೀಡಿರುತ್ತಾರೆ. ಸುಮಾರು 30 ದಾನಿಗಳು ತಲಾ 1 ಲಕ್ಷ ರೂ.ಕ್ಕಿಂತ ಮಿಗಿಲಾಗಿ ಹಣ ನೀಡಿ ಸಹಕರಿಸಿದ್ದಾರೆ ಎಂದರು.

ಇದೇ ವೇಳೆ ಪದ್ಮಶ್ರೀ ಪುರಸ್ಕೃತ ಎಸ್.ಸುಬ್ಬರಾಮನ್, ಹೊಯ್ಸಳ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಮಂದಗೆರೆ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ಶಾಸಕರಾದ ಟಿ.ಎಸ್.ಶ್ರೀವತ್ಸ, ಸಿ.ಕೆ.ರಾಮಮೂರ್ತಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ನಗರ ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಸಂಘದ ಕಾರ್ಯಾಧ್ಯಕ್ಷ ಕೆ.ಆರ್.ಸತ್ಯನಾರಾಯಣ, ಉಪಾಧ್ಯಕ್ಷ ಎಚ್.ಆರ್.ಸುಂದರೇಶನ್, ಸಹ ಕಾರ್ಯದರ್ಶಿ ಎಸ್.ರಂಗನಾಥ, ಕಟ್ಟಡ ಸಮಿತಿ ಅಧ್ಯಕ್ಷ ಎನ್.ಲಕ್ಷ್ಮೀನರಸಿಂಹ, ನಿಕಟಪೂರ್ವ ಅಧ್ಯಕ್ಷ ಎಂ.ಎಲ್.ಕೃಷ್ಣಸ್ವಾಮಿ, ಸಂಘದ ಸದಸ್ಯರಾದ ಭಾರಧ್ವಾಜ್, ಎಸ್.ಎನ್.ಶ್ರೀಮತಿ, ಎನ್.ಲಕ್ಷ್ಮೀನರಸಿಂಹ, ವಿಜಯ ಪ್ರಸಾದ್, ಎನ್.ಚಂದ್ರಶೇಖರ್, ಸಂಧ್ಯಾ ನಂದಕುಮಾರ್, ಎನ್.ಎಸ್.ಜಯಸಿಂಹ, ಕೆ.ಅನುಪಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net