

ಮೈಸೂರು; ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯುವ ಮೈಸೂರು ಶಿಕ್ಷಣ ಮೇಳಕ್ಕೆ (ಎಜುಕೇಷನ್ ಫೇರ್) ಚಾಲನೆ ದೊರೆಯಿತು.
ಸಿಬಿಎಸ್‌ಇ, ಐಸಿಎಸ್‌ಇ, ರಾಜ್ಯ ಪಠ್ಯಕ್ರಮಗಳ ಖಾಸಗಿ ಶಾಲೆಗಳ ಆಡಳಿತ ಸಂಸ್ಥೆಗಳ ಒಕ್ಕೂಟ(ಸಿಐಎಸ್‌ಪಿಎಂಎಎಂ) ಹಾಗೂ ಚಿರಾಗ್ ಆ್ಯಡ್ಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿರುವ ಈ ಮೇಳವನ್ನು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ಮಾತನಾಡಿದ ಶ್ರೀಗಳು, ಪ್ರತಿಯೊಬ್ಬರಿಗೂ ಶಿಕ್ಷಣ ಬಹಳ ಮುಖ್ಯ.
ಇದು ಉತ್ತಮ ಭವಿಷ್ಯ ರೂಪಿಸಿ ಸತ್ಪ್ರಜೆಗಳಾಗಿ ರೂಪಿಸುತ್ತದೆ ಎಂದರು.
ಜ್ಞಾನ ಇರುವ ಕಡೆ ಅಜ್ಞಾನ ಇರಲ್ಲ. ಬೆಳಕು ಇರುವ ಕಡೆ ಕತ್ತಲು ಇರಲ್ಲ. ಪ್ರತಿಯೊಬ್ಬರು ಜ್ಞಾನ ಸಂಪಾದನೆ ಮಾಡಬೇಕು. ಇದಕ್ಕೆ ಯಾವುದೇ ಮಿತಿ, ಕೊನೆಯೂ ಇಲ್ಲ. ಜ್ಞಾನ, ಅರಿವು, ಶಿಕ್ಷಣ ಸಂಪಾದನೆ ಮಾಡಲು ಹೆಚ್ಚಿನ ಆಸಕ್ತಿ ತೋರಬೇಕು ಎಂದರು.
ಮೈಸೂರು ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ನಗರ. ಇಲ್ಲಿ ವಿದ್ಯಾರ್ಥಿಗಳು ಇಚ್ಛಿಸುವ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಅಷ್ಟೊಂದು ವಿಫುಲ ಅವಕಾಶಗಳು ವಿದ್ಯಾರ್ಥಿಗಳಿಗೆ ತೆರೆದುಕೊಂಡಿವೆ. ಇದಕ್ಕೆ ಪೂರಕವಾಗಿ ಆಯೋಜಿಸಿರುವ ಈ ಮೇಳವು ಶಿಕ್ಷಣದ ಮಾಹಿತಿ ಭಂಡಾರವಾಗಿದೆ.
ಇಲ್ಲಿರುವ ರಾಜ್ಯಪಠ್ಯ, ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮ ಬೋಧನೆ ಮಾಡುವ ವಿದ್ಯಾಸಂಸ್ಥೆಗಳ ಕುರಿತು ಇಲ್ಲಿ ಮಾಹಿತಿ ದೊರೆಯುತ್ತಿದೆ. ಶಾಲಾ, ಕಾಲೇಜುಗಳು ಬೋಧಿಸುವ ಕೋರ್ಸ್‌ಗಳು, ಅಲ್ಲಿರುವ ಸೌಲಭ್ಯವನ್ನು ಒಂದೇ ಸೂರಿನಡಿ ವಿದ್ಯಾರ್ಥಿಗಳಿಗೆ, ಪಾಲಕರಿಗೆ, ಸಾರ್ವಜನಿಕರಿಗೆ ತಿಳಿಸಿಕೊಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಅಧ್ಯಕ್ಷ ವಿ.ವೆಂಕಟೇಶ್, ಪದಾಧಿಕಾರಿಗಳಾದ ಎಂ.ಎಲ್.ರವೀಂದ್ರಸ್ವಾಮಿ, ಮೊಹಮ್ಮದ್ ಅಮೀನ್, ಮಂಜುನಾಥ ಶ್ರೀವತ್ಸ, ಕೆ.ಎಸ್.ಸ್ವರೂಪಿಣಿ, ಎಸ್.ರಾಧಕೃಷ್ಣ, ಚಿರಾಗ್ ಆ್ಯಡ್ಸ್‌ನ ವಿವೇಕ್ ಇನ್ನಿತರರಿದ್ದರು.
ಉಜ್ವಲ ಶೈಕ್ಷಣಿಕ ಮತ್ತು ವೃತ್ತಿಪರ ಭವಿಷ್ಯದತ್ತ ವಿದ್ಯಾರ್ಥಿಗಳನ್ನು ಮಾರ್ಗದರ್ಶನ ಮಾಡಲು ಈ ಮೇಳ ನೆರವಾಗುತ್ತಿದ್ದು, ರಾಜ್ಯಾದ್ಯಂತ ಇರುವ ಶಾಲೆ, ಕಾಲೇಜು, ಇಂಜಿನಿಯರಿಂಗ್ ಕಾಲೇಜುಗಳಿಗೆ ಸಂಬಂಧಿಸಿದ ಅಂದಾಜು 80 ಮಳಿಗೆಗಳು ಇಲ್ಲಿವೆ.
ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಶೈಕ್ಷಣಿಕ ಮಾಹಿತಿ, ವಿದ್ಯಾರ್ಥಿ ಯಾವ ಶಾಲೆ, ಕಾಲೇಜು ಸೇರಬೇಕು? ಎಲ್ಲಿ, ಯಾವ ಸೌಲಭ್ಯವಿದೆ? ಎನ್ನುವ ಮಾಹಿತಿ ಇಲ್ಲಿ ಸಿಗುತ್ತಿದೆ. ಅದಕ್ಕಾಗಿ ತಜ್ಞರಿಂದ ಸೂಕ್ತ ಮಾರ್ಗದರ್ಶನವನ್ನು ಆಯಾಯ ಶಿಕ್ಷಣ ಸಂಸ್ಥೆಗಳ ವ್ಯವಸ್ಥೆ ಮಾಡಿವೆ.
ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಸಂಪೂರ್ಣ ಉಚಿತ ಪ್ರವೇಶವನ್ನು ಕಲ್ಪಿಸಿಕೊಡಲಾಗಿದೆ. ವಿದ್ಯಾರ್ಥಿಗಳು ವಿವಿಧ ಶೈಕ್ಷಣಿಕ ಮಾರ್ಗಗಳನ್ನು ಅನ್ವೇಷಿಸಿಕೊಳ್ಳಲು ಹಾಗೂ ತಮ್ಮ ಭವಿಷ್ಯದ ನಿರ್ಧಾರ ಕೈಗೊಳ್ಳಲು ಈ ಮೇಳ ಸಹಕಾರಿಯಾಗಿದೆ.