

ಹುಬ್ಬಳ್ಳಿ : ವೇಮನ ವಿದ್ಯಾವರ್ಧಕ ಸಂಘದ ವಿಶ್ವ ಭಾರತಿ ಬಾಲಕಿಯರ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯವು ಕಳೆದ 50 ವರ್ಷಗಳಿಂದ ಉತ್ತಮ ಶಿಕ್ಷಣ ನೀಡುವ ಜತೆಗೆ ರಾಷ್ಟ್ರಕ್ಕೆ ಉತ್ತಮ ನಾಗರಿಕರನ್ನೂ ನೀಡಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಉಣಕಲ್ ಕ್ರಾಸ್ ಬಳಿಯ ವೇಮನ ವಿದ್ಯಾವರ್ಧಕ ಸಂಘದ ವಿಶ್ವ ಭಾರತಿ ಬಾಲಕಿಯರ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಸುವರ್ಣ ಮಹೋತ್ಸವವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಯಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ರಾಷ್ಟ್ರ ನಿರ್ವಣದ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಅನೇಕರು ಅಂತಾರಾಷ್ಟ್ರೀಯ ಕ್ರೀಡಾಪಟುಗಳಾಗಿ, ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದರು.
ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಶಿಕ್ಷಣ ಪದ್ಧತಿಗೆ ಅನುಗುಣವಾಗಿ ಸಂಸ್ಥೆಯಲ್ಲಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಶಿಕ್ಷಣದ ಜತೆಗೆ ಮಕ್ಕಳಿಗೆ ಅತ್ಯುತ್ತಮ ಕಲಿಕಾ ವಾತಾವರಣ ನಿರ್ವಿುಸಲಾಗಿದೆ. ಉತ್ತಮ ಸಂಸ್ಕಾರ ಕಲಿಸಲಾಗುತ್ತಿದೆ. ಸಂಸ್ಥೆಯ ಈ ಎಲ್ಲ ಕಾರ್ಯಗಳಿಂದಾಗಿ ಜನಮನ್ನಣೆ ಗಳಿಸಿದೆ ಎಂದರು.
ಸುವರ್ಣ ಮಹೋತ್ಸವದ ಅಂಗವಾಗಿ ಹೊರತಂದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಹೆಣ್ಣು ಮಗು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆಮಾತಿನಂತೆ ಕೆ.ಎಚ್. ಪಾಟೀಲ ಅವರು ಕಳೆದ ಐವತ್ತು ವರ್ಷಗಳ ಹಿಂದೆಯೇ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಶಾಲೆ ತೆರೆದಿದ್ದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾಧಾನ್ಯ ಇಲ್ಲದ ಸಮಯದಲ್ಲಿ ಕೇವಲ 9 ವಿದ್ಯಾರ್ಥಿನಿಯರಿಂದ ಆರಂಭವಾಗಿದ್ದ ಶಾಲೆಯಲ್ಲಿ ಇಂದಿನ ದಿನಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಐಎಎಸ್ ಅಧಿಕಾರಿ ಪ್ರಿಯಾ ಪಾಟೀಲ ಸೇರಿದಂತೆ ಶಾಲೆಯ ಇತರ ಹಳೇಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಕಾಂಗ್ರೆಸ್ ಧುರೀಣ ಎಫ್.ಎಚ್. ಜಕ್ಕಪ್ಪನವರ, ಸಾಹಿತಿ ಗೋವಿಂದ ಮಣ್ಣೂರ, ಪ್ರೊ. ಅನಿಲ ವೈದ್ಯ, ವೇಮನ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ವಿ.ಆರ್. ಹೊಸಮನಿ, ಕೆ.ವಿ. ಹುಲಕೋಟಿ, ಸುಜಾತಾ ಬಾಬುರಡ್ಡಿ, ಆರ್.ಟಿ. ಜಂಗಲ, ಆರ್.ಕೆ. ಪಾಟೀಲ, ವೆಂಕರಡ್ಡಿ ಕಿರೇಸೂರ, ಎಚ್.ಪಿ. ಯಡಳ್ಳಿ, ವನಮಾಲಾ ಬಣವಿ, ಅಶೋಕ ಸೋಮಾಪುರ, ಉದಯ ಹೊಸಮನಿ, ಸವಿತಾ ಓದುಗೌಡ್ರ, ಎಚ್.ಎಸ್. ಚೌಡಾಪುರ್, ಪಾಂಡುರಂಗ ಮಾಡಳ್ಳಿ, ಆರ್.ವೈ. ಗುಡರಡ್ಡಿ, ಮಹೇಶ ಪಾಟೀಲ, ಪ್ರಕಾಶ ಹನಮರಡ್ಡಿ ಇತರರು ಪಾಲ್ಗೊಂಡಿದ್ದರು.