

ಚಿಕ್ಕಮಗಳೂರು: ಬಡತನದ ಬೇಗೆಯಿಂದ ಹೊರಬಂದು ಸಮಾಜದ ಮುಖ್ಯ ವಾಹಿನಿಗೆ ಸೇರ್ಪಡೆಗೊಳ್ಳಲು ಶಿಕ್ಷಣವಂತರಾಗುವುದು ಅಗತ್ಯ ಎಂದು ಶಿಕ್ಷಣ ಇಲಾಖೆ ನೌಕರರ ಡಾ. ರಾಧಾಕೃಷ್ಣನ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಲ್.ಜಿ.ಪರಮೇಶ್ವರಪ್ಪ ಹೇಳಿದರು.
ಬಸವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಸಂಘದ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಬಡತನದಿಂದ ಹೊರಬರಲು ಶಿಕ್ಷಣ ಪ್ರಮುಖ ಅಸ್ತ್ರ. ವಿದ್ಯಾವಂತರನ್ನು ಮಾತ್ರ ಸಮಾಜ ಗೌರವಿಸಿ ಆಧರಿಸುತ್ತದೆ. ಮಕ್ಕಳು ಇದನ್ನು ಅರಿತು ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿಮಾತು ಹೇಳಿದರು
ಶಿಕ್ಷಣ ಇಲಾಖೆ ನೌಕರರ ಡಾ. ರಾಧಾಕೃಷ್ಣನ್ ವಿವಿಧೋದ್ದೇಶ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 1,35,523 ರೂಪಾಯಿ ನಿವ್ವಳ ಲಾಭಗಳಿಸಿದ್ದು , ಲಾಭದಲ್ಲಿ ಶೇ.5 ಡಿವಿಡೆಂಡ್ ಅನ್ನು ಸದಸ್ಯರಿಗೆ ನೀಡಲಾಗುವುದು ಎಂದು ತಿಳಿಸಿದರು
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು. ಸಂಘದ ಕಾರ್ಯದರ್ಶಿ ಬಸವಕುಮಾರ್ ವಾರ್ಷಿಕ ವರದಿಯನ್ನು, ನಿರ್ದೇಶಕ ಎಚ್.ಜಿ.ಪ್ರಸನ್ನಕುಮಾರ್ ಆಯವ್ಯಯ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ನಿರ್ದೇಶಕರಾದ ಎಲ್.ಟಿ.ಅಜ್ಜಯ್ಯ, ಕೃಷ್ಣಪ್ಪ, ಲೀಲಾವತಿ, ಲೋಕೇಶ್ ಇತರರಿದ್ದರು.