

ಕೂಡಲಸಂಗಮ: ಬದುಕು ಬದಲಿಸುವ ಶಕ್ತಿ ಶಿಕ್ಷಣಕ್ಕೆ ಇದೆ. ವಿದ್ಯಾರ್ಥಿಗಳು ಆಸಕ್ತಿಯಿಂದ ಶಿಕ್ಷಕರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡುವ ಮೂಲಕ ಸುಂದರ ಬದುಕು ನಿರ್ಮಿಸಿಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯಿತಿ ಲೆಕ್ಕಪರಿಶೋಧನಾ ಅಧಿಕಾರಿ ಅಮೀನ ಅತ್ತಾರ ಹೇಳಿದರು.
ಕೂಡಲಸಂಗಮ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಬದುಕಿನಲ್ಲಿ ಗುರಿ ಮುಖ್ಯ. ಗುರಿಯಿಲ್ಲದ ಬದುಕು ವ್ಯರ್ಥ. ಯಶಸ್ಸು, ಸಾಧನೆಯನ್ನು ಸಮಾಜ ಒಪ್ಪಿಕೊಳ್ಳುವುದು. ಹೊಟ್ಟೆ ಹಸಿವಿಗಿಂತ ಜ್ಞಾನದ ಹಸಿವು ಮುಖ್ಯ. ಜ್ಞಾನ ಪಡೆದ ವ್ಯಕ್ತಿ ಎಲ್ಲಿಯಾದರೂ ಬದುಕಬಲ್ಲ. ಅಧ್ಯಯನದಿಂದ ಸುಂದರ ಬದುಕು ನಿರ್ಮಾಣಗೊಳ್ಳುವ ಜತೆಗೆ ಕುಟುಂಬವೂ ಅಭಿವೃದ್ಧಿ ಹೊಂದುವುದು, ಬದಲಾಗುವುದು. ನಾನು ಕಡುಬಡತನದಲ್ಲಿ ಕಷ್ಟಪಟ್ಟು ಅಧ್ಯಯನ ಮಾಡಿ ಕೆಎಎಸ್ ಪರೀಕ್ಷೆ ಉತ್ತೀರ್ಣನಾಗಿರುವೆ ಎಂದು ತಾವು ಶಿಕ್ಷಣ ಪಡೆಯಲು ಅನುಭವಿಸಿದ ಕಷ್ಟದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕೂಡಲಸಂಗಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ಎ.ವಕ್ರ ಮಾತನಾಡಿ, ಪರಿಶ್ರಮ ಪಟ್ಟು ಅಧ್ಯಯನ ಮಾಡುವವರಿಗೆ ನಿಶ್ಚಿತವಾಗಿ ಪ್ರತಿಲ ದೊರೆಯುವುದು. ಪರಿಶ್ರಮ ಪಟ್ಟು ಅಧ್ಯಯನ ಮಾಡುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಮೊಬೈಲ್ ದಾಸರಾಗದೆ ಓದುವ ಕಡೆ ಹೆಚ್ಚು ಗಮನ ಹರಿಸಬೇಕು. ಉನ್ನತ ಗುರಿಯೊಂದಿಗೆ ಅಧ್ಯಯನ ಮಾಡಿ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಮುತ್ತಣ್ಣ ಕುರಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವದ್ಧಿಗೆ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದಿದೆ. ಅದರ ಸದುಪಯೋಗ ಪಡೆಯಬೇಕು ಎಂದರು.
ಮುಖ್ಯಶಿಕ್ಷಕಿ ಎಸ್.ಬಿ.ಈಟಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಸದಸ್ಯ ಸುಲೇಮಾನ ಮುಲ್ಲಾ, ಮುಖಂಡ ಬಸವರಾಜ ಅಂಬಿಗೇರ, ಶಿಕ್ಷಕರಾದ ಎಚ್.ಡಿ.ಬಡಿಗೇರ, ಬಿ.ಎಸ್.ಕುಂಬಾರ, ಡಿ.ಬಿ.ನದಾಫ್, ಎಸ್.ಎಲ್.ಪಾಟೀಲ, ಎಸ್.ಎಸ್.ಕಟ್ಟಿಮನಿ, ಗುರುರಾಜ ಗಿರಿಜಾ, ಎಸ್.ಎಂ.ದೇವರಡ್ಡಿ, ಎಸ್.ಜಿ.ಗೌಡರ, ಎಚ್.ಕೆ.ಪುರದ ಇದ್ದರು.
ಖಾಸಗಿ ಶಾಲೆಯನ್ನು ಮೀರಿಸುವಷ್ಟು ಸರ್ಕಾರಿ ಶಾಲೆ ಅಭಿವದ್ಧಿ ಹೊಂದಿದೆ. ಗುಣಮಟ್ಟದ ಶಿಕ್ಷಣದಿಂದಲೇ ಈ ಪ್ರೌಢಶಾಲೆಯಲ್ಲಿ 608 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ಸಂತಸದ ವಿಷಯ. - ಅಮೀನ ಅತ್ತಾರ, ಲೆಕ್ಕಪರಿಶೋಧನಾ ಅಧಿಕಾರಿ, ಜಿಲ್ಲಾ ಪಂಚಾಯಿತಿ ಕೊಪ್ಪಳ